Order to increase the compensation amount of KSRTC employees family welfare scheme
KSRTCಯ ನೌಕರರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು ರೂ. 3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ KSRTC ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.
ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೆ ಎಸ್ ಆರ್ ಟಿ ಸಿ ಯಲ್ಲಿ ಈಗಾಗಲೇ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ, ರೂ 1 ಕೋಟಿ ಮೊತ್ತದ ಆರ್ಥಿಕ ಪರಿಹಾರ ಒದಗಿಸುತ್ತಿದ್ದು, ಇಲ್ಲಿಯವರೆಗೆ 7 ಪ್ರಕರಣಗಳಲ್ಲಿ ಅಪಘಾತದಿಂದ ಮರಣ ಹೊಂದಿದ ನೌಕರರ ಅವಲಂಬಿತರಿಗೆ ತಲಾ ರೂ.1 ಕೋಟಿ ನೀಡಲಾಗಿದೆ ಎಂದಿದೆ.
ಮುಂದುವರೆದು, ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಅಂದರೆ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ, ಕಿಡ್ನಿ ವೈಫಲ್ಯ ಸೇರಿದಂತೆ ಇತರೆ ಖಾಯಿಲೆಗಳಿಂದ ಪ್ರತಿ ವರ್ಷ 100 ನೌಕರರು ಮರಣ ಹೊಂದುತ್ತಿದ್ದಾರೆ. ಈ ರೀತಿ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುತ್ತಿರುವ ನೌಕರರ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ನಿಗಮದಿಂದ ಅವರಿಗೆ ನೆರವಾಗಲು ರೂ.3.00 ಲಕ್ಷ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದಲೂ ಸಹ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರವನ್ನುರೂ.3.00 ಲಕ್ಷದಿಂದ ರೂ.10.00 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಮೃತರ ಅವಲಂಬಿತರಿಗೆ ರೂ 7.00 ಲಕ್ಷಗಳ ಹೆಚ್ಚುವರಿ ಪರಿಹಾರ ಮೊತ್ತ ಲಭ್ಯವಾಗುತ್ತದೆ ಎಂದು ತಿಳಿಸಿದೆ.
No comments:
Post a Comment
If You Have any Doubts, let me Comment Here