JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, November 1, 2024

Kannada Rajyotsava Information

  Jnyanabhandar       Friday, November 1, 2024
Kannada Rajyotsava Information 

ಕನ್ನಡ ಭಾಷೆ, ಕನ್ನಡ ನೆಲದ ಬಗ್ಗೆ ನಮ್ಮೆಲ್ಲರಿಗೂ ಅಪಾರ ಹೆಮ್ಮೆ, ಅಭಿಮಾನ, ಭಕ್ತಿ. ಕನ್ನಡಾಂಬೆಯ ಮಕ್ಕಳಾದ ನಾವು ಕರ್ನಾಟಕದ ಹಿರಿಮೆಯನ್ನು ಎತ್ತಿ ಮೆರೆಯುತ್ತೇವೆ. ಕನ್ನಡ ನಾಡು ಹಲವು ವೈವಿಧ್ಯಗಳ ಬೀಡು. ಇಲ್ಲಿನ ಪ್ರತಿಯೊಂದು ಅಂಶವು ನಮ್ಮಲ್ಲಿ ರಾಷ್ಟ್ರಾಭಿಮಾನ ಉಕ್ಕುವಂತೆ ಮಾಡುತ್ತದೆ.

ಇಂತಹ ಅದ್ಭುತ ಕನ್ನಡ ನಾಡು ಉದಯವಾಗಲು ಶ್ರಮಿಸಿದವರು ಅನೇಕರು. ಕನ್ನಡ ನಾಡನ್ನು ಏಕೀಕರಣ ಮಾಡಿದ ಕೀರ್ತಿ ಹಲವು ಹೋರಾಟಗಾರರದ್ದು.

ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. 2024ರ ಕನ್ನಡ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು ಈ ಹೊತ್ತಿನಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ನೆನಪು ಮಾಡಿಕೊಳ್ಳಲೇಬೇಕು. ಕನ್ನಡ ಭಾಷಿಗರ ನಾಡನ್ನು ಒಗ್ಗೂಡಿಸಬೇಕು ಎಂದು ಕನಸು ಕಂಡವರು ನೂರಾರು ಮಂದಿ. ಭಾರತ ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಲಾಗಿತ್ತು. ಈ ಹೋರಾಟದಲ್ಲಿ ಹಲವು ಚಳವಳಿಗಾರರು ಭಾಗವಹಿಸಿದ್ದರು. ಇವರೆಲ್ಲರೂ ಕನ್ನಡ ನಾಡು ಉದಯವಾಗಬೇಕು ಎಂದು ಒಮ್ಮನಸ್ಸಿನಿಂದ ಹೋರಾಡಿದ್ದರು. ಈ ಎಲ್ಲರ ಹೋರಾಟದ ಶ್ರಮದ ಫಲವಾಗಿ 1956, ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು. ಕನ್ನಡ ಭಾಷೆ ಮಾತನಾಡುವ ಜನರ ಪ್ರಾಂತ್ಯಗಳನ್ನು ಒಗ್ಗೂಡಿಸಿ ಒಂದು ರಾಜ್ಯವನ್ನಾಗಿ ಮಾಡಲಾಯಿತು. ಕನ್ನಡ ರಾಜ್ಯೋತ್ಸವದ ಈ ಹೊತ್ತಿನಲ್ಲಿ ಕರ್ನಾಟಕ ಏಕೀಕರಣದ ಕುರಿತು ಒಂದಿಷ್ಟು ವಿಚಾರಗಳು ಇಲ್ಲಿವೆ. ಶಾಲೆ ಮಕ್ಕಳಿಗೆ ಕರ್ನಾಟಕ ಏಕೀಕರಣದ ಬಗ್ಗೆ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದರೆ ಈ ಮಾಹಿತಿಗಳು ನೆರವಾಗಬಹುದು ನೋಡಿ.

ಕರ್ನಾಟಕ ಏಕೀಕರಣ ಇತಿಹಾಸ

ಕರ್ನಾಟಕವು ಒಂದು ರಾಜ್ಯವಾಗಿ ರೂಪುಗೊಳ್ಳುವ ಮೊದಲು 4 ಪಾಂತ್ರ್ಯಗಳನ್ನು ಹೊಂದಿತ್ತು. ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯ, ಬಾಂಬೆ ಪ್ರಾಂತ್ಯ, ಕೊಡಗು ಹೀಗೆ. ಈ ಭಾಗದಲ್ಲಿ ಕನ್ನಡ ಮಾತನಾಡುವವರ ಸಂ‌ಖ್ಯೆ ಹೆಚ್ಚಿತ್ತು. ಈ ಎಲ್ಲರನ್ನೂ ಒಗ್ಗೂಡಿಸಿ ಒಂದು ಪ್ರತ್ಯೇಕ ರಾಜ್ಯ ಮಾಡಬೇಕು ಎಂದು 1856ರಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದವು, ಆ ಕಾಲದಲ್ಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿದ್ದರೂ ಕರ್ನಾಟಕ ಏಕೀಕರಣ ಚಳವಳಿಗೆ ಒಂದು ರೂಪ ಕೊಟ್ಟವರು ಆಲೂರು ವೆಂಕಟರಾವ್‌ ಅವರು. 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿತ್ತು. ಆದರೂ ಚಳವಳಿ ತೀವ್ರ ಸ್ವರೂಪ ಪಡೆದಿದ್ದು ವೆಂಕಟರಾವ್ ಅವರ ಆಗಮನದ ನಂತರ. ಆಲೂರು ಅವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖರಾಗಿದ್ದರೂ ಗುದ್ಲೆಪ್ಪ ಹಳ್ಳಿಕೇರಿ , ಸಿದ್ದಪ್ಪ ಕಾಂಬ್ಳಿ , ಆರ್.ಎಚ್.ದೇಶಪಾಂಡೆ, ರಂಗರಾವ್ ದಿವಾಕರ್, ಕೌಜಲಗಿ ಶ್ರೀನಿವಾಸರಾವ್, ಶ್ರೀನಿವಾಸ್ ರಾವ್ ಮಂಗಳವೇಧೆ, ಎ.ಜೆ.ದೊಡ್ಡಮೇಟಿ , ಕೆಂಗಲ್ ಹನುಮಂತಯ್ಯ , ಗೊರೂರು ರಾಮಸ್ವಾಮಿ ಅಯ್ಯಂಗಾರ್ , ಎಚ್.ಮರಿಯಪ್ಪ ಸುಬ್ರಮಣಸ್ವಾಮಿ ಅಯ್ಯಂಗಾರ್ , ಎಸ್.ನಿಜಯ್ಯಪ್ಪ, ಚೆನ್ನಯ್ಯ, ಟಿ. ವೀರನಗೌಡ, ಹೆಚ್.ಸಿ.ದಾಸಪ್ಪ, ಎಚ್.ಸಿದ್ದಯ್ಯ , ಕೆ.ಆರ್.ಕಾರಂತ್, ಬಿ.ಎಸ್.ಕಕ್ಕಿಲ್ಲಾಯ, ಬಿ.ವಿ.ಕಕ್ಕಿಲ್ಲಾಯ ಮತ್ತು ಅನಕೃ ಮೊದಲಾದವರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, ಕನ್ನಡ ಭಾಷಿಗರ ರಾಜ್ಯ ಕರ್ನಾಟಕವಾಗಿ ರೂಪಗೊಳ್ಳಲು ಶ್ರಮಿಸಿದರು.

1924 ರಲ್ಲಿ ಎನ್‌ಐಸಿಯ ಹೊಸದಾಗಿ ರಚನೆಯಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧೀನದಲ್ಲಿ ಬೆಳಗಾವಿ ಕಾಂಗ್ರೆಸ್ ನಡೆಯಿತು. ಮಹಾತ್ಮ ಗಾಂಧಿಯವರು ಈ ಐತಿಹಾಸಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾವೇಶದಲ್ಲಿ ಎಲ್ಲ ಭಾಗದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇದಿಕೆಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನವನ್ನೂ ಆಯೋಜಿಸಲಾಗಿತ್ತು. ಸಿದ್ದಪ್ಪ ಕಾಂಬ್ಳಿ ಅಧ್ಯಕ್ಷತೆ ವಹಿಸಿದ್ದರು. ಇದರಲ್ಲಿ ಕರ್ನಾಟಕದ ಪ್ರಮುಖರು, ಲೇಖಕರು, ಕವಿಗಳು ಮತ್ತು ಬುದ್ಧಿಜೀವಿಗಳು ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹುಯಿಲ್ಗೋಳ್ ನಾರಾಯಣ ರಾವ್ ಅವರು ತಮ್ಮ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಹಾಡನ್ನು ಮೊದಲು ಹಾಡಿದ್ದು ಇಲ್ಲಿಯೇ.

ಏಕೀಕರಣಕ್ಕೆ ಸಾಹಿತಿಗಳು, ಕವಿಗಳ ಬೆಂಬಲ

ಕರ್ನಾಟಕ ಏಕೀಕರಣ ಸಭೆಯು ನಂತರ ಕರ್ನಾಟಕ ಏಕೀಕರಣ ಸಂಘ ಎಂದು ಕರೆಯಲ್ಪಟ್ಟಿತು. ನಂತರ ಕುವೆಂಪು , ಬೇಂದ್ರೆ , ಗೋಕಾಕ , ಎಸ್‌ಬಿ ಜೋಶಿ, ಬೆಟಗೇರಿ ಕೃಷ್ಣಶರ್ಮ, ಎಂ ಗೋವಿಂದ ಪೈ, ಶಿವರಾಮ ಕಾರಂತರು ಮತ್ತು ಕಯ್ಯಾರ ಕಿಯ್ಯಣ್ಣ ರೈ ಅವರಂತಹ ಸಾಹಿತಿಗಳಿಂದ ಬೆಂಬಲ ದೊರೆಯಿತು . ಪತ್ರಿಕೆಗಳು ಮತ್ತು ಮಾಧ್ಯಮಗಳಿಂದ ವ್ಯಾಪಕ ಬೆಂಬಲವೂ ಬೆಳೆಯಿತು. 

ಜನವರಿ 1953 ರಲ್ಲಿ, ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಆಂಧ್ರಪ್ರದೇಶದ ರಚನೆಯ ಪರವಾಗಿ ನಿರ್ಣಯವನ್ನು ಅಂಗೀಕರಿಸಲಾಯಿತು ಆದರೆ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕು ಎಂಬುದನ್ನು ಅಂಗೀಕಾರ ಮಾಡಿರಲಿಲ್ಲ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಬಾಂಬೆ ವಿಧಾನಸಭಾ ಸದಸ್ಯರಾದ ಎ.ಜೆ.ದೊಡ್ಡಮೇಟಿ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಧಾರವಾಡದ ಜಕ್ಕಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ನಂತರ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಹಲವರು ಗಾಯಗೊಂಡರು ಮತ್ತು ಹಲವರನ್ನು ಬಂಧಿಸಲಾಯಿತು.

ಹೀಗೆ ಈ ಎಲ್ಲಾ ಹೋರಾಟಗಳು, ಹೋರಾಟಗಾರರ ಶ್ರಮದ ಫಲವಾಗಿ ಮೈಸೂರು ರಾಜ್ಯ ಅಂದರೆ ಇಂದಿನ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಅಂಗೀಕರಿಸಲಾಯಿತು. ಆದರೂ ಮೈಸೂರು ರಾಜ್ಯದ ಕೆಲವು ಭಾಗಗಳನ್ನು ಸೇರಿಸದಿರುವ ಬಗ್ಗೆ ನಿರಾಶೆಯೂ ಇತ್ತು. ಹೊರಗಿಡಲಾದ ಪ್ರದೇಶಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ಕಾಸರಗೋಡು , ಇದು ಏಕೀಕರಣ ಚಳವಳಿಯು ತನ್ನ ಆಂದೋಲನವನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಆದರೆ ಈ ಪ್ರದೇಶವನ್ನು ಕರ್ನಾಟಕದ ಭಾಗದಿಂದ ಹೊರಗಿಡಲಾಗಿತ್ತು. ಕೊನೆಗೂ 1956ರಲ್ಲಿ ಕನ್ನಡ ಮಾತನಾಡುವವರ ಕರ್ನಾಟಕ ರಾಜ್ಯ ಉದಯವಾಗುತ್ತದೆ.

1 ನವೆಂಬರ್ 1973 ರಂದು, ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದಾಗ, ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು .

ಕರ್ನಾಟಕ ಏಕೀಕರಣದ 50ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ, ಆಗಿನ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವು ಕರ್ನಾಟಕವನ್ನು ಒಗ್ಗೂಡಿಸಲು ಅವರು ಸಲ್ಲಿಸಿದ ಸೇವೆಗಾಗಿ 36 ವ್ಯಕ್ತಿಗಳು ಮತ್ತು 4 ಸಂಸ್ಥೆಗಳಿಗೆ ಏಕೀಕರಣ ಪ್ರಶಸ್ತಿಯನ್ನು ನೀಡಿತು.



logoblog

Thanks for reading Kannada Rajyotsava Information

Previous
« Prev Post

No comments:

Post a Comment

If You Have any Doubts, let me Comment Here