Regarding the celebration of Mahatma Gandhi Jayanti on Date: 02.10.2024 in all Government, Aided, Unaided Primary and High Schools of the State
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಿನಾಂಕ: 02.10.2024 ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಾವ ರೀತಿ ಆಚರಣೆ ಮಾಡಬೇಕು ಎಂದು ಮಾರ್ಗಸೂಚಿಯನ್ನು ತಿಳಿಸಿದೆ.
ಈ ಕುರಿತು ಬಿ. ಬಿ. ಕಾವೇರಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ವಿಷಯಾನ್ವಯ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ನಾಡ ಹಬ್ಬಗಳನ್ನು ಮತ್ತು ಪ್ರಮುಖ ಜಯಂತಿಗಳನ್ನು ಆಯಾ ದಿನದಂದು ಕಡ್ಡಾಯವಾಗಿ, ಗೌರವಪೂರ್ವಕವಾಗಿ ಆಚರಿಸಲು ಕ್ರಮವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈಗಾಗಲೇ ಅಗತ್ಯ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ದಿನಾಂಕ 02.10.2024ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಜಯಂತಿಯನ್ನು ಹಾಗೂ ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದು, ಈ ಐತಿಹಾಸಿಕ ಘಟನೆಯ ಶತಮಾನೋತ್ಸವ ಸಂಭ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅರ್ಥಪೂರ್ಣವಾಗಿ, ಸಂಭ್ರಮಯುತವಾಗಿ ಮತ್ತು ವೈಶಿಷ್ಟ್ಯಪೂರ್ಣವಾಗಿ ಕೆಳಕಂಡಂತೆ ಕಡ್ಡಾಯವಾಗಿ ಆಚರಿಸಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಇಲಾಖಾಧಿಕಾರಿಗಳಿಗೆ ಹಾಗೂ ರಾಜ್ಯದ ಎಲ್ಲಾ ಶಾಲೆಗಳ ಮುಖ್ಯಸ್ಮರಿಗೆ ಸೂಚಿಸಲಾಗಿದೆ ಎಂದು ಹೇಳಿದೆ.
ಮಾರ್ಗಸೂಚಿಗಳು
* ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಿನಾಂಕ 02.10.2024ರಂದು ಬೆಳಗ್ಗೆ 9 ಗಂಟೆಗೆ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಎಸ್.ಡಿ.ಎಂ.ಸಿಗಳ ಸಮ್ಮುಖದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಗೌರವಪೂರ್ವಕವಾಗಿ ಪುಷ್ಪನಮನ ಸಲ್ಲಿಸುವುದು.
* ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಗೌರವಾರ್ಥ ಬಿಳಿ ಗಾಂಧಿ ಟೋಪಿಯನ್ನು ಸ್ವಯಂಪ್ರೇರಿತರಾಗಿ ಧರಿಸಬಹುದಾಗಿರುತ್ತದೆ.
* ಈ ದಿನದಂದು ಆಯಾ ಶಾಲೆಗಳಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿಯವರ ಹಾಗೂ ಇತರೆ ಮಹಾನ್ ನಾಯಕರ ಜೀವನ ಮತ್ತು ಸಾಧನೆ, ಅವಿಸ್ಮರಣೀಯ ಕೊಡುಗೆಗಳ ಕುರಿತು, ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಘಟನೆಗಳ ಕುರಿತು ಸ್ಮರಿಸುವುದು ಹಾಗೂ ದೇಶಪ್ರೇಮ, ಸ್ವಾತಂತ್ರ್ಯ, ಸಮಾನತೆ, ಶಾಂತಿ, ಅಹಿಂಸೆ, ಸತ್ಯನಿಷ್ಠೆ, ಪ್ರಾಮಾಣಿಕತೆ, ಶಿಸ್ತು, ಜಾತ್ಯಾತೀತತೆ, ಅಸ್ಪೃಶ್ಯತೆ ನಿವಾರಣೆ, ಸ್ವಚ್ಛತೆ, ಶ್ರಮದಾನ ಹಾಗೂ ತಂಬಾಕು ಮತ್ತು ಮಾದಕ ವಸ್ತುಗಳಿಂದ ದೂರವಿರುವುದು ಮುಂತಾದ ಆದರ್ಶ ತತ್ವಗಳ ಹಾಗೂ ಜೀವನ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಹಾಗೂ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯವಾಗಿದ್ದು ಪ್ರೇರೇಪಿಸುವುದು.
* ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದು, ಈ ಐತಿಹಾಸಿಕ ಘಟನೆ ಶತಮಾನೋತ್ಸವನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಈ ಕುರಿತು ಹಾಗೂ ಮಹಾತ್ಮ ಗಾಂಧಿಯವರ ಜನ್ಮ ದಿನ ಅಕ್ಟೋಬರ್ 2ಅನ್ನು ಪ್ರತಿ ವರ್ಷ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ವಿಶ್ವಸಂಸ್ಥೆಯಿಂದ ಆಚರಿಸಲಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು.
* ಸದರಿ ದಿನದಂದು ಶ್ರಮದಾನವನ್ನು ಕೈಗೊಂಡು ಆಯಾ ಶಾಲೆಗಳ ಆವರಣ, ಸುತ್ತ-ಮುತ್ತ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳುವುದು. ಈ ಸಂದರ್ಭದಲ್ಲಿ ಅಗತ್ಯಾನುಸಾರ ಸ್ಥಳೀಯ ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳುವುದು.
* ಮಹಾತ್ಮ ಗಾಂಧಿಯವರ ಜಯಂತಿಯ ಮಹತ್ವವನ್ನು ಹಾಗೂ ತತ್ವಗಳನ್ನು ಮತ್ತು ಸಂದೇಶವನ್ನು ಸಾರ್ವಜನಿಕರಿಗೆ ವ್ಯಾಪಕವಾಗಿ ತಲುಪಿಸಲು ಆಯಾ ಊರಿನಲ್ಲಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ 6 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರಾಷ್ಟ್ರ ಧ್ವಜದೊಂದಿಗೆ, ರಾಷ್ಟ್ರ ಪ್ರೇಮವನ್ನು ಸಾರುವ ಘೋಷಣಾ ವಾಕ್ಯಗಳು ಉದ್ಧರಿಸುತ್ತಾ 1 ಕಿ.ಮೀ ಗೆ ಕಡಿಮೆಯಿಲ್ಲದಂತೆ ಜಾಥಾವನ್ನು ಕೈಗೊಳ್ಳತಕ್ಕದ್ದು ಹಾಗೂ ಕಡೆಯಲ್ಲಿ ಅಹಿಂಸೆಯನ್ನು ಪಾಲಿಸುವ ಬಗ್ಗೆ ಮತ್ತು ತಂಬಾಕು ಮತ್ತು ಮಾದಕ ವಸ್ತುಗಳಿಂದ ದೂರವಿರುವ ಕುರಿತಾದ ಪ್ರತಿಜ್ಞಾವಿಧಿಯನ್ನು ಕೈಗೊಳ್ಳತಕ್ಕದ್ದು.
* ಈ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಾಗೂ ಉಪಾಹಾರ ಮತ್ತು ಅಕ್ಷರ ದಾಸೋಹ ಯೋಜನೆಯಡಿಯ ಬಿಸಿಯೂಟವನ್ನು ವಿತರಿಸತಕ್ಕದ್ದು.
ಮೇಲ್ಕಂಡಂತೆ ಹಾಗೂ ಈ ಸಂಬಂಧ ಸರ್ಕಾರ, ಸಂಬಂಧಿಸಿದ ಇಲಾಖೆಗಳು ಮತ್ತು ಜಿಲ್ಲಾಡಳಿತ ಕಾಲ-ಕಾಲಕ್ಕೆ ನೀಡುವ ಸೂಚನೆಗಳನ್ನು ಆಧರಿಸಿ ಕಡ್ಡಾಯವಾಗಿ ಆಚರಿಸಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಹಾಗೂ ರಾಜ್ಯದ ಎಲ್ಲಾ ಶಾಲೆಗಳ ಮುಖ್ಯಸ್ಥರಿಗೆ ಈ ಮೂಲಕ ಸೂಚಿಸಲಾಗಿದೆ ಎಂದು ಹೇಳಿದೆ.
No comments:
Post a Comment
If You Have any Doubts, let me Comment Here