Aluru Venkat Rao Information
ಕನ್ನಡ ಕುಲ ಪುರೋಹಿತರೆಂದೇ ಕನ್ನಡಿಗರಿಂದ ಗೌರವಾದರಗಳಿಂದ ಕರೆಯಿಸಿಕೊಂಡ ಆಲೂರು ವೆಂಕಟರಾಯರು ತಮ್ಮ ಪ್ರೌಢ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿಕೊಂಡು ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪದವೀಧರರಾದರು. ಅಂದಿನ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸೇನಾಪತಿ ಬಾಪಟರು, ವೀರಸಾವರ್ಕರರು ಅವರ ಸಹಾಧ್ಯಾಯಿಗಳಾಗಿದ್ದರು.
ವೆಂಕಟರಾಯರು, ಹಂಪೆಗೆ ಒಮ್ಮೆ ಹೋಗಿದ್ದಾಗ ಹಂಪೆಯ ಗತವೈಭವ ಕಂಡು ಅವರ ಹೃದಯ ಝಲ್ಲೆಂದಿತು. ನೊಂದ ಅವರು ಇತಿಹಾಸದ ಆಳವಾದ ಅಭ್ಯಾಸವನ್ನಾರಂಭಿಸಿದರು. ಶಿಲಾಲೇಖನಗಳು ತಾಮ್ರಪಟಗಳು, ಪ್ರಾಚೀನ ಗ್ರಂಥಗಳು ಕಾಗದ ಪತ್ರಗಳಲ್ಲಿ ಅಡಕವಾಗಿರುವ ಇತಿಹಾಸದ ಅಂಶಗಳನ್ನು ಸಂಗ್ರಹಿಸಿ ತಮ್ಮ ಅಮರ ಗ್ರಂಥವಾದ 'ಕರ್ನಾಟಕ ಗತವೈಭವ' ಕೃತಿಯನ್ನು ಬರೆದರು. "ಕರ್ನಾಟಕದ ವೀರರತ್ನಗಳು' ಕೃತಿಯಲ್ಲಿ ಕನ್ನಡ ಮಹಾವೀರರ, ಹುತಾತ್ಮರ ಪರಿಚಯ ಮಾಡಿಕೊಟ್ಟರು.
ಲೋಕಮಾನ್ಯ ಬಾಲ ಗಂಗಾಧರ ತಿಲಕರ "ಗೀತ ರಹಸ್ಯ" ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು. ಗೀತಾಭ್ಯಾಸವನ್ನು ಸತತವಾಗಿ ಮಾಡಿದ ವೆಂಕಟ್ಟ ರಾಯರು ಗೀತೆಯ ಬಗ್ಗೆ ಸ್ವತಂತ್ರ ವ್ಯಾಖ್ಯಾನ ಗ್ರಂಥಗಳನ್ನು ಬರೆದರು. ಗೀತಪ್ರಕಾಶ, ಗೀತಪರಿಮಳ ಗೀತಕುಸುಮ ಮಂಜರಿ ಗ್ರಂಥಗಳು ಈ ನಿಟ್ಟಿನಲ್ಲಿ ಅವರು ಬರೆದ ಗ್ರಂಥಗಳು.
ಶಿಕ್ಷಣಮೀಮಾಂಸೆ, ಸಂಸಾರಸುಖ, ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯವಿದ್ಯಾರಣ್ಯರು ಕರ್ನಾಟಕತ್ವದ ವಿಕಾಸ, ನನ್ನ ಜೀವನ, ಮುಂತಾದವು ಅವರು ಬರೆದಿರುವ ಇತರ ಕೃತಿಗಳು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಇತಿಹಾಸ ಸಂಶೋಧಕ ಮಂಡಳಿಗಳ ಸ್ಥಾಪನೆಗೆ ಕಾರಣರಾದವರಲ್ಲಿ ವೆಂಕಟರಾಯರೂ ಒಬ್ಬರು.
ಕರ್ನಾಟಕದ ಉತ್ಕರ್ಷಕ್ಕಾಗಿ ಚಿಂತಿಸಿ ಹಗಲಿರುಳು, ಅದಕ್ಕಾಗಿ ತನು ಮನ ಧನ ಅರ್ಪಿಸಿದವರಲ್ಲಿ ವೆಂಕಟರಾಯರು ಪ್ರಮುಖರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅವರು ಜಯ ಕರ್ನಾಟಕ ಮತ್ತು ನವ ಜೀವನ ಗ್ರಂಥ ಮಾಲೆಗಳ ಮೂಲಕ ಸ್ಮರಣೀಯ ಕಾವ್ಯವನ್ನು ಮಾಡಿದ್ದಾರೆ.
ಕರ್ನಾಟಕ ಏಕೀಕರಣದ ಕನಸು ಕಂಡ ಅವರು 1956, ನವೆಂಬರ್ ಒಂದರಂದು ವಿಶಾಲ ಮೈಸೂರು ಎಂದು ರೂಪುಗೊಂಡರೂ ವಿಜಯ ನಗರದ ರಾಜಧಾನಿಯಾಗಿದ್ದ ಹಂಪಿಯಲ್ಲಿ, ಪಂಪಾ ವಿರೂಪಾಕ್ಷನ ಸನ್ನಿಧಿಯಲ್ಲಿ ರಾಜ್ಯೋತ್ಸವ ಕಾಠ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
1930ರ ಅಕ್ಟೋಬರ್ 5ರಿಂದ 7ರವರೆಗೆ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
1941ರಲ್ಲಿ ಹೈದರಾಬಾದ್‌ನಲ್ಲಿ ಕನ್ನಡಿಗರ ಸಮ್ಮೇಳನ ನಡೆದಾಗ, ಕರ್ನಾಟಕ ಕುಲ ಪುರೋಹಿತ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
No comments:
Post a Comment
If You Have any Doubts, let me Comment Here