ಜೂನ್ ತಿಂಗಳು ಆರಂಭವಾಗುತ್ತಿದ್ದು 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿದೆ. ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ನಿವಾರಣೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿರುವ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗಳು ಸೇರಿದಂತೆ 700 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿಸಿದೆ.
100 ಶಾಲೆಗಳು: ಲೋಕಸಭೆ ಚುನಾವಣೆ 2024ರ ಮಾದರಿ ಚುನಾವಣಾ ನೀತಿ ಸಂಹಿತೆ ಕೊಂಚ ಸಡಿಲಗೊಳಿಸಿರುವ ಕಾರಣ ಕರ್ನಾಟಕ ಸರ್ಕಾರ ನೇಮಕಾತಿಗೆ ಒಪ್ಪಿಗೆಯನ್ನು ನೀಡಿದೆ. 2018-19ನೇ ಸಾಲಿನಲ್ಲಿ ಆರಂಭಿಸಲಾದ 100 ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಪ್ರತಿ ಶಾಲೆಗೆ 7 ಹುದ್ದೆಗಳಂತೆ ಒಟ್ಟು 700 ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲು ಆರ್ಥಿಕ ಇಲಾಖೆ ಮೇ 22ರಂದು ಒಪ್ಪಿಗೆ ಕೊಟ್ಟಿದೆ.
ಈ ಹುದ್ದೆಗಳಲ್ಲಿ ಮುಖ್ಯೋಪಾಧ್ಯಾಯರ 100 ಹುದ್ದೆಗಳು, ಕನ್ನಡ, ಆಂಗ್ಲ ಉರ್ದು ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 100 ಜನ ಶಿಕ್ಷಕರಂತೆ 700 ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ವಿವಿಧ ಮಾಧ್ಯಮದ ಮೌಲಾನ ಆಜಾದ್ ಮಾದರಿ ಶಾಲೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮುಖ್ಯೋಪಾಧ್ಯಯರು ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರ ಕೊರತೆ ಇದೆ. ಖಾಯಂ ಶಿಕ್ಷಕರು ಇಲ್ಲದ ಕಾರಣ ಹೊರಗುತ್ತಿಗೆ ಆಧಾರದ ಮೇಲೆಯೇ ಅನೇಕ ಶಾಲೆಗಳಲ್ಲಿ ಶಿಕ್ಷಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಹಲವು ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗಿಂತ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಶಿಕ್ಷಕರ ಸಂಖ್ಯೆಯೇ ಹೆಚ್ಚಾಗಿದೆ. ಆದ್ದರಿಂದ ಮೌಲಾನ ಆಜಾದ್ ಮಾದರಿ ಶಾಲೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಡಲಾಗಿತ್ತು. ಆರ್ಥಿಕ ಇಲಾಖೆಗೆ ಹೊಸ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈಗ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಹಸಿರು ನಿಶಾನೆ ಕೊಟ್ಟಿದೆ.
ಕರ್ನಾಟಕ ಸರ್ಕಾರ 2017-18ರಲ್ಲಿ 100 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭ ಮಾಡಿತು. ಇದಕ್ಕಾಗಿ ಹಣಕಾಸು ಇಲಾಖೆಯು 100 ಮುಖ್ಯೋಪಾಧ್ಯಾಯರು ಮತ್ತು ಅತಿಥಿ ಅಧ್ಯಾಪಕರು ಸೇರಿದಂತೆ 700 ಬೋಧಕ ಹುದ್ದೆಗಳಿಗೆ ಅನುಮೋದನೆ ನೀಡಿತ್ತು.
2018-19ರಲ್ಲಿ ಮತ್ತೆ 100 ಶಾಲೆಗಳನ್ನು ಆರಂಭಿಸಲಾಯಿತು. ಆದರೆ ಈ ಶಾಲೆಗಳಿಗೆ ಯಾವುದೇ ಬೋಧಕ ಹುದ್ದೆಗಳನ್ನು ನೇಮಕ ಮಾಡಲು ಹಣಕಾಸು ಇಲಾಖೆ ಅನುಮೋದನೆ ನೀಡಲಿಲ್ಲ. ಆದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ 100 ಶಾಲೆಗಳಿಗೆ ಮುಖ್ಯೋಪಾಧ್ಯಾಯರು ಸೇರಿದಂತೆ 929 ಅತಿಥಿ ಶಿಕ್ಷಕರನ್ನು ನೇಮಿಸಿ ಅಂದಿನಿಂದಲೂ ಸ್ವಂತ ನಿಧಿಯಿಂದ ವೇತನ ಪಾವತಿಸಿ ನಡೆಸಿಕೊಂಡು ಬರುತ್ತಿತ್ತು.
No comments:
Post a Comment
If You Have any Doubts, let me Comment Here