ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನದ ಬಳಿಕ ಮತ ಎಣಿಕೆಯೂ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೊಂದು ಚುನಾವಣೆ ನಡೆಯಲಿದೆ. ಇನ್ನೂ ಎರಡನೇ ಹಂತದ ಚುನಾವಣೆಗೆ ಐದು ದಿನ ಇರುವಾಗಲೇ ಕರ್ನಾಟಕದಲ್ಲಿ ಶಿಕ್ಷಕರು ಹಾಗೂ ಪದವೀಧರರ ವಿಧಾನಪರಿಷತ್ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣೆ ಆಯೋಗವು ಗುರುವಾರ ಘೋಷಿಸಿದೆ.
ಕರ್ನಾಟಕದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ 2024ರ ಮೇ 09ರಂದು ಅಧಿಸೂಚನೆ ಹೊರ ಬೀಳಲಿದ್ದು,ಅಂದಿನಿಂದಲೇ ನಾಮಪತ್ರ ಸಲ್ಲಿಕೆಯೂ ಶುರುವಾಗಲಿದೆ. 2024 ರ ಜೂನ್ 03ರಂದು ಆರು ವಿಧಾನಪರಿಷತ್ ಮತದಾನ ನಡೆಯಲಿದೆ. ಜೂನ್ 06ರಂದು ಮತ ಎಣಿಕೆ ನಡೆಯಲಿದೆ.
ಯಾವ ಕ್ಷೇತ್ರಗಳಿಗೆ ಮತದಾನ
ಕರ್ನಾಟಕದ ತಲಾ ಮೂರು ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಹಲಿದೆ. ಇದರಲ್ಲಿ ರಾಜ್ಯದ ಕಲಬುರಗಿ ಕೇಂದ್ರಿತ ಈಶಾನ್ಯ ಪದವೀಧರರ ಕ್ಷೇತ್ರ, ಮಂಗಳೂರು ಕೇಂದ್ರಿತ ನೈರುತ್ಯ ಪದವೀಧರರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ, ತುಮಕೂರು ಕೇಂದ್ರಿತ ಆಗ್ನೇಯ ಶಿಕ್ಷಕರ ಕ್ಷೇತ್ರ, ಮಂಗಳೂರು ಕೇಂದ್ರಿತ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರದಅವಧಿ ಇದೇ ವರ್ಷ ಜೂನ್ 21 ರಂದು ಕೊನೆಗೊಳ್ಳಲಿದೆ. ಮೇಲಿನ ಸ್ಥಾನಗಳಿಗೆ ಜೂನ್ 12ರ ಒಳಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕಾಗಿದೆ ಎಂದು ಚುನಾವಣೆ ಆಯೋಗವು ತಿಳಿಸಿದೆ.
ಯಾರು ಸದಸ್ಯರಿದ್ದಾರೆ?
ಇದರಲ್ಲಿ ರಾಜ್ಯದ ಕಲಬುರಗಿ ಕೇಂದ್ರಿತ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಚಂದ್ರಶೇಖರ್ ಬಿ. ಪಾಟೀಲ್ ಇದ್ದಾರೆ. ಇದು ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲಾ ವ್ಯಾಪ್ತಿ ಒಳಗೊಂಡಿದೆ. ಮಂಗಳೂರು ಕೇಂದ್ರಿತ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಜಾ.ದಳದ ಆಯನೂರು ಮಂಜುನಾಥ್ ಸದಸ್ಯರಿದ್ದು ಆ ಸ್ಥಾನ ಈಗ ಖಾಲಿಯಿದೆ. ಇದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ವ್ಯಾಪ್ತಿ ಒಳಗೊಂಡಿದೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಎ.ದೇವೇಗೌಡ ಇದ್ಧಾರೆ. ಇದು ಬೆಂಗಳೂರು ನಗರ ವ್ಯಾಪ್ತಿಯನ್ನು ಒಳಗೊಂಡಿರುವ ಕೇತ್ರ.
ತುಮಕೂರು ಕೇಂದ್ರ ಇರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಹಾಲಿ ಸದಸ್ಯರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದ್ದ ನಾರಾಯಣಸ್ವಾಮಿ ಸೋತರೂ ಮತ್ತೆ ವಿಧಾನಪರಿಷತ್‌ಗೆ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದರು. ಈಗ ಮತ್ತೆ ಚುನಾವಣೆ ಎದುರಿಸಲು ಅಣಿಯಾಗುತ್ತಿದ್ದಾರೆ.
ಮಂಗಳೂರು ಕೇಂದ್ರಿತ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನ ಎಸ್.ಎಲ್.ಭೋಜೇಗೌಡ ಇದ್ದಾರೆ. ಈ ಕ್ಷೇತ್ರವು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯಲ್ಲಿದೆ. ಇನ್ನು ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜಾ.ದಳದಿಂದ ಗೆದ್ದು ರಾಜೀನಾಮೆ ನೀಡಿ ಈಗ ಕಾಂಗ್ರೆಸ್ ಸೇರಿರುವ ಹಿರಿಯ ಸದಸ್ಯ ಮರಿತಿಬ್ಬೇಗೌಡ ಇದ್ದಾರೆ. ಈ ಕ್ಷೇತ್ರವು ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ. ಮಂಗಳೂರು. ಬೆಂಗಳೂರು, ಕಲಬುರಗಿ, ಮೈಸೂರು ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಈ ಚುನಾವಣೆಗಳಿಗೆ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವರು. ನೋಂದಾಯಿತ ಶಿಕ್ಷಕರು ಚುನಾವಣೆ ಮತದಾರರು.
ಹೀಗಿದೆ ವೇಳಾಪಟ್ಟಿ ವಿವರ
ವಿಧಾನಪರಿಷತ್ ಚುನಾವಣೆ ಅಧಿಸೂಚನೆ: ಮೇ 09, 2024
ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ: ಮೇ 16, 2024
ನಾಮಪತ್ರಗಳ ಪರಿಶೀಲನೆ: ಮೇ 17, 2024
ನಾಮಪತ್ರ ಹಿಂದಕ್ಕೆ ಪಡೆಯಲು ಕೊನೇ ದಿನಾಂಕ: ಮೇ 20, 2024
ಮತದಾನ ದಿನ: ಜೂನ್ 03, 2024
ಮತ ಎಣಿಕೆ ದಿನ: ಜೂನ್ 06, 2024
ಹೆಚ್ಚಿನ ಮಾಹಿತಿಗಾಗಿ ಆದೇಶ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here