JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, April 14, 2024

Dr B. R. Ambedkar information

  Jnyanabhandar       Sunday, April 14, 2024
*ಡಾ. ಬಾಬಾ ಸಾಹೇಬ್ ಅಂಬೇಡ್ಕರ್ : ವಿಶ್ವ ನಾಯಕ*

ಡಾ.ಬಿ.ಆರ್.ಅಂಬೇಡ್ಕರ್ ರವರು 14-04-1891 ರಲ್ಲಿ ಜನಿಸಿದರು. ಒಬ್ಬ ವಕೀಲರಾಗಿ, ಸಂವಿಧಾನದ ಶಿಲ್ಪಿಯಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜಶಾಸ್ತ್ರದ ತಜ್ಞರಾಗಿ, ಆಡಳಿತಗಾರರಾಗಿ, ಕಾರ್ಮಿಕ ಮುಖಂಡರಾಗಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಸಮಾಜಕ್ಕಾಗಿ ಮುಡುಪಾಗಿಟ್ಟವರು. ದೇಶದ ಇತಿಹಾಸ ಮರೆಯಲಾರದ ಕೊಡುಗೆಯನ್ನು ನೀಡಿದರೂ ಸಹ ಅವರನ್ನು ಕೇವಲ ದಲಿತರಿಗೆ ಮಾತ್ರವೇ ನಾಯಕರೆಂದು ಸೀಮಿತಗೊಳಿಸಲಾಯಿತು. ಆದರೆ, ಇದು ಸತ್ಯಕ್ಕೆ ದೂರವಾದ ಸಂಗತಿ.
ದೇಶದ ಹಳ್ಳಿ-ಹಳ್ಳಿಯಲ್ಲಿ ಹಂಚಿಹೋದ ಅವಿದ್ಯಾವಂತ, ಆರ್ಥಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದ ದಲಿತರನ್ನು ಸಂಘಟಿಸಿ, ರಾಷ್ಟ್ರಮಟ್ಟದಲ್ಲಿ ಒಂದು ವೇದಿಕೆಯನ್ನು ರೂಪಿಸಿ ಅವರ ಆಶೋತ್ತರಗಳಿಗೆ ಒಂದು ರೂಪ ನೀಡಿದವರು ಅಂಬೇಡ್ಕರ್ ರವರು. ಕುಂಭಕರ್ಣನಂತೆ ನಿದ್ದೆ ಹೋಗುತ್ತಿದ್ದ ರನ್ನು ಬಡಿದೆಬ್ಬಿಸಿ ಅವರಲ್ಲಿ ಧೈರ್ಯ ಮತ್ತು ಸ್ಥೈರ್ಯವನ್ನು ತುಂಬಿದರು. ಬಾಯಿಗೆ ಹಾಕಿದ ಬೀಗವನ್ನು ಮುರಿದು ಮಾತಿಲ್ಲದ ದಲಿತರಿಗೆ ಮಾತನ್ನು ನೀಡಿದರು. ನ್ಯಾಯಕ್ಕಾಗಿ, ಸಮಾನತೆಗಾಗಿ ಮತ್ತು ಸ್ವಾಭಿಮಾನಕ್ಕಾಗಿ ಧ್ವನಿ ಎತ್ತುವಂತೆ ಮಾಡಿದ್ದಾರೆ. ಜಾತಿ ವ್ಯವಸ್ಥೆಯ ಗುಲಾಮಿತನದಿಂದ ವಿಮೋಚನೆಗೊಳ್ಳಲು ದಲಿತರಲ್ಲಿ ಹೋರಾಟದ ಕಿಡಿಯನ್ನು ಹಚ್ಚಿದವರು ಅಂಬೇಡ್ಕರ್ ರವರು. ಹಾಗಾಗಿ ಅಂಬೇಡ್ಕರ್ ರವರು ನಿರ್ವಿವಾದವಾಗಿ ದೇಶದ ಸುಮಾರು ಶೇ‌.23 ಜನಸಂಖ್ಯೆಯಷ್ಟಿರುವ ದಲಿತರ ಆಶಾಕಿರಣವಾಗಿದ್ದರು ಎಂಬುದರಲ್ಲಿ ಎರಡನೇ ಮಾತಿಲ್ಲ.
ದೇಶದ ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟು ಇರುವ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣಲಾಯಿತು. ದೇಶದ ಮಹಿಳೆಯರ ಸ್ಥಿಥಿಗಳ ಬಗ್ಗೆ ಅಂಬೇಡ್ಕರ್ ಅವರು ಆಳವಾದ ಅಧ್ಯಯನವನ್ನು ಮಾಡಿದರು. ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ಸಮಾನತೆಯನ್ನು ಸಾಧಿಸಿ ಎಲ್ಲ ರಂಗಗಳಲ್ಲಿ ಸಮಾನ ಅವಕಾಶಗಳನ್ನು ದಕ್ಕುವಂತಾಗಬೇಕೆಂದು ಆಶಿಸಿದರು. ಇಂದು ಮಹಿಳೆಯರು ತಮ್ಮ ಕುಟುಂಬದ ಆಸ್ತಿಯಲ್ಲಿ ಹಕ್ಕು, ಮದುವೆ, ವಿಚ್ಛೇದನ, ಜೀವನಾಂಶ, ದತ್ತು ತೆಗೆದುಕೊಳ್ಳುವ ವಿಚಾರಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲೆಂದು ಸ್ವತಂತ್ರ ಭಾರತದ ಸಂಸತ್ ನಲ್ಲಿ ಹಿಂದೂ ಕೋಡ್ ಬಿಲ್ಲನ್ನು ಮಂಡಿಸಿದರು. ತಮ್ಮ ಸರ್ಕಾರಕ್ಕೆ ಬಹುಮತವಿದ್ದರೂ ಸಹ ಸಂಸತ್ ನಲ್ಲಿ ಅಗತ್ಯವಿದ್ದ ಬಹುಮತ ಸಿಗದೇ ಹಿಂದೂ ಕೋಡ್ ಬಿಲ್ ಬಿದ್ದು ಹೋಯಿತು. ಇದರಿಂದ ತೀವ್ರವಾಗಿ ನೊಂದ ಅಂಬೇಡ್ಕರ್ ಅಂದೆ ತಮ್ಮ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಮಹಿಳಾ ಸಮಾನತೆಗಾಗಿ ರಾಜಿನಾಮೆ ನೀಡಿದ ಮತ್ತೊಬ್ಬ ರಾಜಕಾರಣಿಯನ್ನು ಕಾಣಲು ಸಾಧ್ಯವಿಲ್ಲ. ಒಟ್ಟು ಜನಸಂಖ್ಯೆಯ ಶೇಕಡ 50ರಷ್ಟು ಮಹಿಳೆಯರ ಹಿತವನ್ನು ಕಾಪಾಡಲು ತ್ಯಾಗ ಮಾಡಿದ ಅಂಬೇಡ್ಕರ್ ರವರನ್ನು ಕೇವಲ ಒಂದು ಜಾತಿಯ ನಾಯಕನೆಂದು ಕರೆಯುವುದು ಸತ್ಯಕ್ಕೆ ಬಗೆದ ದ್ರೋಹವೆಂದೆ ನಾನು ಅಭಿಪ್ರಾಯ ಪಡುತ್ತೇನೆ. 1942 ರಿಂದ 1946 ರವರೆಗೆ ಅಂಬೇಡ್ಕರ್ ರವರು ಬ್ರಿಟಿಷ್ ವೈಸರಾಯ್ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದರು. ತಮಗಿದ್ದ ಇತಿಮಿತಿಯೊಳಗೆ ಸಾಧ್ಯವಾದಷ್ಟು ಕಾರ್ಮಿಕರ ಪರವಾದ ಕೆಲಸ ನಿರ್ವಹಿಸಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ ದಿನಕ್ಕೆ 14 ಗಂಟೆ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಿದರು. ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜಾ ಸೌಲಭ್ಯ ಒದಗಿಸಿದರು. ವೇತನ ಸಹಿತ ರಜಾ ದಿನಗಳನ್ನು ಕಲ್ಪಿಸಿದರು. ಕನಿಷ್ಠ ಕೂಲಿ, ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಿದರು. ಕಾರ್ಖಾನೆ ಕಾಯ್ದೆ ಇತ್ಯಾದಿಯಾಗಿ ಅನೇಕ ಕಾರ್ಮಿಕರ ಪರವಾದ ಕೆಲಸವನ್ನು ಮಾಡಿದರು. ಒಟ್ಟು ಜನಸಂಖ್ಯೆಯ ಶೇಕಡ 60ರಷ್ಟು ದುಡಿಯುವ ವರ್ಗದಿಂದ ಅನುಭವಿಸುತ್ತಿರುವ ಹಲವು ಹಕ್ಕುಗಳ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಹಿಂದೆ ಅಂಬೇಡ್ಕರ್ ಅವರ ಕೊಡುಗೆ ಮಹತ್ತರವಾದದ್ದು. ದೇಶದ ದುಡಿಯುವ ವರ್ಗದ ಹಿತಕ್ಕೆ ಶ್ರಮಿಸಿದ ಅಂಬೇಡ್ಕರ್ ರವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಎಷ್ಟು ಸರಿ?.
1946ರಲ್ಲಿ 272 ಜನರನ್ನು ಒಳಗೊಂಡ ಸಂವಿಧಾನ ರಚನಾ ಸಭೆಯನ್ನು ಆಯ್ಕೆ ಮಾಡಲಾಯಿತು. ಕರಡು ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ರವರನ್ನು ನೇಮಿಸಲಾಯಿತು. ದಿನಕ್ಕೆ 18 ಗಂಟೆಗಳಿಗಿಂತಲೂ ಹೆಚ್ಚು ಕೆಲಸ ನಿರ್ವಹಿಸಿ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಕೊಟ್ಟರು. ಅವರ ಪರಿಶ್ರಮವನ್ನು ಗಮನಿಸಿ ಅಂಬೇಡ್ಕರ್ ರವರನ್ನು ಸಂವಿಧಾನದ ಶಿಲ್ಪಿ ಎಂದು ಕರೆದರು. 67 ವರ್ಷಗಳು ಕಳೆದ ನಂತರ ನಮ್ಮ ಸಂವಿಧಾನ ಪ್ರಸ್ತುತವಾಗಿ ಉಳಿದಿದೆ. ಇಂದು ದೇಶದ 140 ಕೋಟಿ ಜನರ ಜೀವನವನ್ನು ನಿಯಂತ್ರಿಸುತ್ತಿರುವ ನಮ್ಮ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರನ್ನು ದೇಶದ ಜನನಾಯಕನೆನ್ನಬೇಕೆ? ಅಥವಾ ಕೇವಲ ದಲಿತ ನಾಯಕನೆನ್ನಬೇಕೆ? ನೀವೇ ತೀರ್ಮಾನ ಮಾಡಿ.
ಅಮೇರಿಕಾ ದೇಶದ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ರವರು ಉನ್ನತ ಶಿಕ್ಷಣವನ್ನು ಮತ್ತು ಪಿ ಎಚ್ ಡಿ ಪದವಿಯನ್ನು ಗಳಿಸಿದರು. ಮುಂದುವರೆದು ಅದೇ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿಯೂ ಕೆಲಸ ನಿರ್ವಹಿಸಿದರು. 2014ರಲ್ಲಿ ಅಮೆರಿಕಾ ದೇಶದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ರವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡಿ ಗೌರವಿಸಿದರು. ಪ್ರತಿಮೆಯ ಕೆಳಗೆ ಹೀಗೆ ಬರೆಯಲಾಗಿದೆ. Symbol of knowledge (ಜ್ಞಾನದ ಪ್ರತೀಕ).
ಮುಂದುವರೆದು, ವಿಶ್ವಸಂಸ್ಥೆ ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ನ್ನು "ವಿಶ್ವದ ಜ್ಞಾನದ ದಿನ" ವನ್ನಾಗಿ ಆಚರಿಸಲು ಜಗತ್ತಿನ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. ಹೀಗೆ ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಲ್ಲ. ದೇಶದ ನಾಯಕರು ಮತ್ತು ವಿಶ್ವದ ನಾಯಕರು. ವರ್ಷಗಳು ಕಳೆದಂತೆ ಅಂಬೇಡ್ಕರ್ ರವರು ವಿಶ್ವ ದಂತಕತೆಯಾಗಿ ಬೆಳೆಯುತ್ತಲೇ ಇದ್ದಾರೆ.
ನಮ್ಮ ಸಂವಿಧಾನ ಅನುಷ್ಠಾನಕ್ಕೆ ಬಂದು 70 ವರ್ಷಗಳೇ ಕಳೆಯಿತು. ನಮ್ಮ ಸಂವಿಧಾನವನ್ನು ನಾವು ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಕೆಲವರು ಓದಿಕೊಂಡರು ಸರಿಯಾದ ರೀತಿಯಲ್ಲಿ ಅರ್ಥೈಸಲಿಲ್ಲ. ಆದಕಾರಣ, ನಾವು ಇಂದು ಅನೇಕ ಸಮಸ್ಯೆಗಳನ್ನು, ಸವಾಲುಗಳನ್ನು ಮತ್ತು ವೈರುಧ್ಯಗಳನ್ನು ಕಾಣುತ್ತಿದ್ದೇವೆ. ನಮ್ಮ ಸಂವಿಧಾನವನ್ನು ನಾವೆಲ್ಲರೂ ಓದಬೇಕು. ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಅಂತರ್ಗತ ಮಾಡಿಕೊಳ್ಳಬೇಕು. ಮತ್ತು ಅದರಂತೆ ನಡೆದುಕೊಳ್ಳಬೇಕು.
ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ಮೂಲತತ್ವಗಳು. ಕಳೆದ 70 ವರ್ಷಗಳ ಗಣರಾಜ್ಯ ಭಾರತದಲ್ಲಿ ನಮ್ಮ ಸಂವಿಧಾನದ ಮೂಲ ತತ್ವಗಳನ್ನು ನಾವು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲಿಲ್ಲ ಮತ್ತು ಅನುಷ್ಠಾನಕ್ಕೆ ತರಲಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಸಂವಿಧಾನದ ಮೂಲ ತತ್ವಗಳನ್ನು ನಾವು ಅರ್ಥೈಸಿ ಅನುಷ್ಠಾನಗೊಳಿಸಬೇಕಾದ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಕರಡು ಸಂವಿಧಾನವನ್ನು ಭಾರತ ಸರ್ಕಾರದ ಅಂಗೀಕಾರಕ್ಕೆ ಮಂಡಿಸಿದ ಸಮಯದಲ್ಲಿ ಅಂಬೇಡ್ಕರ್ ರವರು ಈ ರೀತಿ ಉಚ್ಚರಿಸಿದರು.
"On January 26th 1950 we are going to enter into a life of contradictions. In politics we will have equality and in a social and economic life we will have inquality. We must remove the contradiction at the earliest moment, or those who suffer from inequality will below up the structure of political democracy".
ಕಳೆದ ಏಳು ದಶಕಗಳಲ್ಲಿ ಪ್ರಜಾಪ್ರಭುತ್ವವೆಂದರೆ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸುವುದು, ಮತ ಹಾಕುವುದು ಮತ್ತು ತಮಗೆ ಇಷ್ಟ ಬಂದಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಎಂಬುದಕ್ಕೆ ಸೀಮಿತಗೊಳಿಸಲಾಯಿತು. ಆದರೆ, ನಮ್ಮ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವವೆಂದರೆ ರಾಜಕೀಯ ಪ್ರಜಾಪ್ರಭುತ್ವ, ಸಾಮಾಜಿಕ ಪ್ರಜಾಪ್ರಭುತ್ವವೂ ಒಳಗೊಂಡಿದೆ. ನಾವು ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡಲೇ ಇಲ್ಲ. ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಬೆಸೆದು ನೋಡುವ ಪ್ರಯತ್ನ ಮಾಡಲೇ ಇಲ್ಲ. ಇದರ ಪರಿಣಾಮವಾಗಿ ಇಂದು ದೇಶದಲ್ಲಿ ಸಾಮಾಜಿಕ ಭಯೋತ್ಪಾದನೆ ಮತ್ತು ಆರ್ಥಿಕ ಭಯೋತ್ಪಾದನೆ ಜನರನ್ನು ಕಾಡುತ್ತಿದೆ. ನಾವು ಗಳಿಸಿದ ಹಕ್ಕುಗಳನ್ನು ಮತ್ತು ಅಭಿವೃದ್ಧಿಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಅವರ ಎಚ್ಚರಿಕೆ ಮಾತುಗಳನ್ನು ನೆನಪಿಸಿಕೊಂಡು ನಮ್ಮ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಸಂವಿಧಾನದಲ್ಲಿ ಜಾತ್ಯಾತೀತ ರಾಷ್ಟ್ರ ಕಟ್ಟಬೇಕೆಂಬುದಾಗಿ ತಿಳಿಯಪಡಿಸಿದೆ. ಸಂವಿಧಾನ ಜಾರಿಗೆ ಬಂದ ನಂತರ ಜಾತ್ಯಾತೀತವೆಂದರೆ ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಧರ್ಮಗಳು ಸಮಾನ ಎಂಬುದಾಗಿ ವ್ಯಾಖ್ಯಾನಿಸಲಾಯಿತು. ಆದರೆ ಜಾತ್ಯಾತೀತವೆಂದರೆ ಸರ್ಕಾರಕ್ಕೆ ತನ್ನದೇ ಧರ್ಮವಿರಕೂಡದು. ರಾಜಕಾರಣದ ಜೊತೆ ಧರ್ಮವನ್ನು ಬೆರೆಸಬಾರದು. ತನ್ನ ಶಿಕ್ಷಣ ನೀತಿ, ಕೃಷಿ ನೀತಿ, ಕೈಗಾರಿಕಾ ನೀತಿ, ಭಾಷಾ ನೀತಿ, ಆಹಾರದ ನೀತಿ, ವಿದೇಶಾಂಗ ನೀತಿ ಇತ್ಯಾದಿಗಳು ಯಾವುದೇ ಧಾರ್ಮಿಕ ಧೋರಣೆಗೆ ಅನುಗುಣವಾಗಿರಬಾರದು. ಬದಲಾಗಿ ಸರ್ಕಾರ ತನ್ನ ನೀತಿಯನ್ನು ದೇಶದ ಎಲ್ಲಾ ಜನರ ಪರವಾಗಿ ಎಲ್ಲರ ಹಿತವನ್ನು ಕಾಪಾಡುವ ಮತ್ತು ಎಲ್ಲರ ಕಲ್ಯಾಣವನ್ನು ಸಾಧಿಸುವ ದಿಕ್ಕಿನತ್ತ ರೂಪುಗೊಳ್ಳಬೇಕು. ಇದು ನಿಜವಾದ ಜಾತ್ಯತೀತವಾಗುತ್ತದೆ. ನಾವು ಜಾತ್ಯಾತೀತವೆಂಬ ಮೌಲ್ಯವನ್ನು ಸರಿಯಾದ ರೀತಿಯಲ್ಲಿ ಅರ್ಥೈಸದ ಕಾರಣ ಇಂದು ಮೂಲಭೂತವಾದ ಮತ್ತು ಕೋಮುವಾದ ತಾಂಡವವಾಡುತ್ತಿದೆ. ಮುಂದುವರೆದು ಧರ್ಮ ಮತ್ತು ಧರ್ಮ ಗುರುಗಳು ರಾಜಕೀಯ ಅಧಿಕಾರವನ್ನು ತಮ್ಮ ಕೈಗೆತ್ತಿಕೊಂಡಿದ್ದಾರೆ. ಈ ಬೆಳವಣಿಗೆ ನಮ್ಮ ಸಂವಿಧಾನದ ಮೂಲತತ್ವವಾದ ಜಾತ್ಯತೀತ ಮೌಲ್ಯಕ್ಕೆ ಧಕ್ಕೆ ತರುವಂತಹದ್ದು.
ಸಾಮಾಜಿಕ ನ್ಯಾಯ ಎನ್ನುವುದು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಆದರೆ ಇಂದು ಸಾಮಾಜಿಕ ನ್ಯಾಯ ಎಂದರೆ ಕೇವಲ ಮೀಸಲಾತಿ ಎಂದು ಸರಣಿಕರಿಸಲಾಗಿದೆ. ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯದ ಒಂದು ಸಣ್ಣ ಭಾಗವಷ್ಟೇ. ದುಡಿಯುವ ಕೈಗಳಿಗೆ ಕೆಲಸ ಕೊಡುವುದು, ಕೆಲಸಕ್ಕೆ ಸಮಾನವಾದ ವೇತನವನ್ನು ನೀಡುವುದು, ಕೆಲಸದ ಭದ್ರತೆಯನ್ನು ಸಹ ಒದಗಿಸುವುದು, ಸಾಮಾಜಿಕ ನ್ಯಾಯವೇ. ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ಲಕ್ಷಗಟ್ಟಲೆ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರನ್ನು ರಕ್ಷಿಸುವುದು ಸಹ ಸಾಮಾಜಿಕ ನ್ಯಾಯವೇ. ಮಕ್ಕಳ, ವೃದ್ಧರ, ವಿಕಲಾಂಗ ಚೇತನರ ಆರೈಕೆ, ಅವರ ಬೇಡಿಕೆಗಳನ್ನು ಪೂರೈಸುವುದು ಸಾಮಾಜಿಕ ನ್ಯಾಯವೇ. ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳಾಂತರಗೊಂಡ ಲಕ್ಷಗಟ್ಟಲೆ ಜನರಿಗೆ ರಿಹ್ಯಾಬಿಲಿಟೇಟ್ ಮಾಡುವುದು ಸಹ ಸಾಮಾಜಿಕ ನ್ಯಾಯವೇ. ಗಣರಾಜ್ಯ ಭಾರತ ಇಂದು ಬಹಳ ಶ್ರೀಮಂತವಾಗಿದೆ. ಆದರೆ, ಈ ಶ್ರೀಮಂತಿಕೆ ಈ ದೇಶದ ಕೇವಲ ಕೆಲವೇ ಕೆಲವು ಜನರ ಹಿಡಿತದಲ್ಲಿದೆ. ಶ್ರೀಮಂತ ಮತ್ತು ಬಡವರ ನಡುವೆ ಅಜಗಜಾಂತರ ಅಂತರವಿದೆ. ಈ ರೀತಿಯ ಅಸಮಾನ ಭಾರತವನ್ನು ನಾವು ಕಟ್ಟಿದ್ದೇವೆ. ಅಸಮಾನತೆಯಿಂದ ದೇಶದ ಬಹುಸಂಖ್ಯಾತ ಜನರನ್ನು ಹಸಿವು, ಬಡತನ, ನಿರುದ್ಯೋಗ, ಅಭದ್ರತೆ ಇತ್ಯಾದಿ ಕಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಹಿಂಸೆ, ಲೂಟಿ, ದರೋಡೆ, ದಂಗೆ ಇತ್ಯಾದಿಗಳು ದೇಶವನ್ನು ಕಾಡುತ್ತವೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಚಿಂತನೆ ನಮ್ಮನ್ನು ಮುನ್ನಡೆಸಲಿ ಎಂದು ಆಶಿಸೋಣ...
ಜೈ ಭೀಮ್... ಜೈ ಭಾರತ್...

💐💐🌹🌹👑👑🙏🏼💐



logoblog

Thanks for reading Dr B. R. Ambedkar information

Previous
« Prev Post

No comments:

Post a Comment

If You Have any Doubts, let me Comment Here