*ಭಾರತದ ಧಾರ್ಮಿಕ ರಾಯಭಾರಿ ಸಂತ ಸೇವಾಲಾಲ್ ಮಹಾರಾಜರ 285ನೇ ಜನ್ಮ ದಿನೋತ್ಸವ ವಿಶೇಷ.*
ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜನದಂಬೆಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು, ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿಮಾತು ಹೇಳಿದ್ದರು.
ಈ ನಮ್ಮ ದೇಶದ ನೆಲ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದು ಈ ವೈವಿಧ್ಯತಾ ಸಂಸ್ಕೃತಿಗೆ ಹಲವಾರು ಸಾಂಸ್ಕೃತಿಕ ರಾಯಭಾರಿಗಳು ಕಾರಣೀಭೂತರು, ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ತಮಂಧತೆಯನ್ನು ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು.
ಸಂತ ಸೇವಾಲಾಲರು ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬಲ್ಲಿ ಶ್ರೀ ಭೀಮ ನಾಯಕ್, ಶ್ರೀಮತಿ ಧರ್ಮಿಣಿ ಯಾಡಿ (ಮಾತೆ) ಯವರ ಮಗನಾಗಿ 15 ಫೆಬ್ರವರಿ 1739ರಲ್ಲಿ ಜನಿಸಿದರು. ಇವರು ಜನನವಾದ ಸೂರಗೊಂಡನ ಕೊಪ್ಪವನ್ನು ಭಾಯಗಢ ಎಂದು ಕರೆಯಲಾಗುತ್ತದೆ. ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದರು. ಅಲ್ಲದೇ ಜಗದಂಬೆಯ ಆರಾಧಕರಾಗಿ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದರು. 18ನೇ ಶತಮಾನದಲ್ಲಿ ಲಂಬಾಣಿ ಜನಾಂಗದ ಹಕ್ಕಿಗಾಗಿ ಆಗಿನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟವನ್ನು ಮಾಡಿದರು.
ಲಂಬಾಣಿ ಸಮುದಾಯ ಸಾವಿರಾರು ವರ್ಷಗಳಿಂದ ನಗರ ಮತ್ತು ಗ್ರಾಮೀಣ ಜೀವನಗಳಿಂದ ದೂರವಿದ್ದು, ಅರಣ್ಯ ವಾಸಿಗಳಾಗಿ ಜೀವನ ಸಾಗಿಸುತ್ತಿದ್ದರು. ಇವರಲ್ಲಿನ ಅಜ್ಞಾನ ಅಂಧಕಾರಗಳನ್ನು ದೂರ ಮಾಡಿ ಜ್ಞಾನ ಮಾರ್ಗ ತೋರಿದ ಸೇವಾಲಾಲರನ್ನು ಬಜಾರರು ಮೋತಿವಾಳು ಅಥವಾ ಲಾಲ ಮೋತಿ ಎಂದು ಕರೆಯುತ್ತಿದ್ದರು. ಮುಂಬೈಯ ಸ್ಮಿತ್ ಭಾವುಚಾ ಎಂಬಲ್ಲಿ ಪೋರ್ಚುಗೀಸರ ಹಡಗು ಸಿಕ್ಕಿಹಾಕಿಕೊಂಡಾಗ ಅದನ್ನು ತಮ್ಮ ಜಾಣತನದಿಂದ ದಡ ಸೇರಿಸಿದ ಸೇವಾಲಾಲರಿಗೆ ಪೋರ್ಚುಗೀಸರು ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಆದ್ದರಿಂದಲೇ ಇವರನ್ನು ಮೋತಿವಾಳೋ ಎಂದು ಕರೆಯುತ್ತಿದ್ದರು.
ಸೇವಾಲಾಲ್ ಒಬ್ಬ ದನಗಾಯಿ ಗೋಪಾಲಕನಾಗಿ ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ (ದಾರು, ಗಾಂಜಾ ಮತ್ ಪೀವೋ) ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ (ಕಾಮ ಕ್ರೋಧೇರಿ ಧೂಣಿ ಬಾಳೋ), ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಹೇಳಿದರು. ಸೇವಾ ಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ತನ್ನ ಸಮಾಜದ ಜನರ ಕಷ್ಟಕ್ಕಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ದರಾಗಿದ್ದರು.
ಇಂತಹ ಮಹಾನ್ ಸಂತ ನಮ್ಮ ನಾಡಿನಲ್ಲಿ ನೆಲೆಸಿದ್ದರು ಎಂಬುದೇ ನಮಗೆ ಹೆಮ್ಮೆಯ ವಿಚಾರ. ಇವರಂತೆ ಹಲವು ಮಹನೀಯರ ವಿಚಾರಧಾರೆಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳು ಅರ್ಥಪೂರ್ಣವಾಗುತ್ತದೆ. ಇಂತಹ ಮಹನೀಯರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಾಗಿಸದೇ ಸರ್ವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ರಾಯಭಾರಿಗಳಾಗಿ ಸ್ವೀಕರಿಸಿದಾಗ ಮಾತ್ರವೇ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸರ್ವರಿಗೂ ಸಮಸ್ತ ಸದ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 284ನೇ ಜಯಂತಿಯ ಭಕ್ತಿ ಪೂರ್ವಕ ಶುಭಾಶಯಗಳು
🌹🌹🌹🌹🌹
No comments:
Post a Comment
If You Have any Doubts, let me Comment Here