VA Recruitment 2024 Updates
ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಯ (Job Alert) ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕಂದಾಯ ಇಲಾಖೆ ಶುಭ ಸುದ್ದಿ ನೀಡಿದೆ. ಸದ್ಯವೇ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ (Village Administrative Officer) ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದು, ನೇಮಕ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಆರಂಭಿಸಿದೆ.
ಈಗಾಗಲೇ ಆರ್ಥಿಕ ಇಲಾಖೆಯು 2023-24, 2024-25 ಹಾಗೂ 2025-26 ನೇ ಸಾಲಿಗೆ ವಾರ್ಷಿಕವಾಗಿ 500 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಒಟ್ಟಾರೆ 1,820 ಹುದ್ದೆಗಳು ಖಾಲಿ ಇದ್ದು, ಈ ಪೈಕಿ ಒಂದು ಸಾವಿರ ಹುದ್ದೆಗಳಿಗೆ ಸದ್ಯವೇ ನೇಮಕಾತಿ ನಡೆಯಲಿದೆ. ಪಿಯುಸಿ ಓದಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈಗಾಗಲೇ ಜಿಲ್ಲಾವಾರು ಖಾಲಿ ಹುದ್ದೆಗಳನ್ನು ಗುರುತಿಸಲಾಗಿದ್ದು, ಕೂಡಲೇ ಮೀಸಲಾತಿ ಹಂಚಿಕೆಯನ್ನು ಪೂರ್ಣಗೊಳಿಸಿ, ಮಾಹಿತಿ ನೀಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಜನವರಿ 25 ರಂದು ಪತ್ರ ಬರೆದಿದ್ದಾರೆ. ಈ ಮಾಹಿತಿಯು ಲಭ್ಯವಾಗುತ್ತಿದ್ದಂತೆಯೇ ನೇಮಕ ಪ್ರಕ್ರಿಯೆ ನಡೆಸಲು ಪ್ರಾಧಿಕಾರಕ್ಕೆ ಕೋರಲಾಗುತ್ತದೆ ಎಂದು ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆ
ಈ ಹಿಂದೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಗ್ರಾಮ ಲೆಕ್ಕಿಗ (Village Accountant) ಹುದ್ದೆಗಳೆಂದು ಕರೆಯಲಾಗುತ್ತಿತ್ತು. 2022 ರಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಪದನಾಮವನ್ನು ಬದಲಾಯಿಸಿ, ಗ್ರಾಮ ಆಡಳಿತ ಅಧಿಕಾರಿ ಎಂದು ಮರುನಾಮಕರಣ ಮಾಡಲಾಗಿತ್ತು. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಈ ಹುದ್ದೆಗಳಿಗೆ ನಡೆಯುತ್ತಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಬದಲಾವಣೆ ತಂದು ರಾಜ್ಯಮಟ್ಟದಲ್ಲಿ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಮೆರಿಟ್ ಆಧಾರದಲ್ಲಿ ನೇಮಕ ಮಾಡಲು ನಿರ್ಧರಿಸಲಾಗಿದೆ.
ಇದುವರೆಗೆ ಪಿಯುಸಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದಲ್ಲಿ ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಮಾಡಲಾಗುತ್ತಿತ್ತು. ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕ ಪ್ರಕ್ರಿಯೆ ನಡೆಸಲಿವೆ.
ಸ್ಪರ್ಧಾತ್ಮಕ ಪರೀಕ್ಷೆ ಬಳಿಕ ಅಭ್ಯರ್ಥಿಗಳ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಲಿದೆ. ನಂತರ ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವರನ್ನು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆಗೊಳಿಸಲಾಗುತ್ತದೆ. ನಿಗದಿತ ಮೀಸಲಾತಿಯಂತೆ ಹುದ್ದೆಗಳನ್ನು ಗುರುತಿಸಿ, ಆ ಪ್ರಕಾರ ಹುದ್ದೆ ಭರ್ತಿಯಾಗಲಿವೆ. ಈ ನೇಮಕ ಪ್ರಕ್ರಿಯೆಗೆ ಈಗಾಗಲೇ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸಹ ನೀಡಿದೆ.
ಹೊಸ ಪದ್ಧತಿಯಿಂದ ಲಾಭ
ಈ ಹುದ್ದೆಯ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದರಿಂದ ಅಭ್ಯರ್ಥಿಗಳು ಪೂರ್ವಭಾವಿಯಾಗಿ ಸಾಕಷ್ಟು ತಯಾರಿ ನಡೆಸುತ್ತಾರೆ. ಪಂಚಾಯತ್ ರಾಜ್ ವ್ಯವಸ್ಥೆ, ಗ್ರಾಪಂಗಳ ಕಾರ್ಯ ನಿರ್ವಹಣೆ, ಸರ್ಕಾರಿ ಯೋಜನೆ ಮತ್ತು ಅನುಷ್ಠಾನದ ಬಗ್ಗೆ ಅರಿತು ಕೊಂಡು ಪರೀಕ್ಷೆ ಎದುರಿಸುವ ಕಾರಣಕ್ಕೆ ಅವರಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅನುಕೂಲವಾಗಲಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮದ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಿದರೆ, ಗ್ರಾಮ ಆಡಳಿತಾಧಿಕಾರಿ ಆಡಳಿತಾತ್ಮಕ ಕಾರ್ಯಗಳಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುತ್ತಾರೆ. ಈ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಲು ಈ ಪರೀಕ್ಷಾ ವ್ಯವಸ್ಥೆ ನೆರವಾಗಲಿದೆ ಮತ್ತು ನೇಮಕಾತಿಯು ಪಾರದರ್ಶಕವಾಗಿರಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?
ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಇಲ್ಲಿದೆ; ಬೆಂಗಳೂರು ನಗರ-56, ಬೆಂಗಳೂರು ಗ್ರಾಮಾಂತರ-61, ಚಿತ್ರದುರ್ಗ-57, ದಾವಣಗೆರೆ-00, ಕೋಲಾರ-79, ತುಮಕೂರು-130, ರಾಮನಗರ-93, ಚಿಕ್ಕಬಳ್ಳಾಪುರ-75, ಶಿವಮೊಗ್ಗ-55, ಮೈಸೂರು-112, ಚಾಮರಾಜನಗರ-99, ಮಂಡ್ಯ-108, ಹಾಸನ-96, ಚಿಕ್ಕಮಗಳೂರು-41, ಕೊಡಗು-10, ಉಡುಪಿ-41, ದಕ್ಷಿಣ ಕನ್ನಡ-90, ಬೆಳಗಾವಿ-113, ವಿಜಯಪುರ-12, ಬಾಗಲಕೋಟೆ-46, ಧಾರವಾಡ-30, ಗದಗ-54, ಹಾವೇರಿ-59, ಉತ್ತರ ಕನ್ನಡ-15, ಕಲಬುರಗಿ-120, ರಾಯಚೂರು-14, ಕೊಪ್ಪಳ-34, ಬಳ್ಳಾರಿ-34, ಬೀದರ್-44, ಯಾದಗಿರಿ-18, ವಿಜಯನಗರ-24, ಒಟ್ಟು 1,820
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
No comments:
Post a Comment
If You Have any Doubts, let me Comment Here