*ರಾಷ್ಟ್ರೀಯ ಮತದಾರರ ದಿನಾಚರಣೆ*
ಜನವರಿ 25
ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25 ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಈ ಬಾರಿ ‘ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಚುನಾವಣಾ ಅರಿವು (Electoral Literacy for Stronger Democracy)’ ಎಂಬ ಧ್ಯೇಯವನ್ನಿಟ್ಟುಕೊಂಡು ಮತದಾರರ ದಿನ ಆಚರಿಸಲಾಗುತ್ತಿದೆ.
*ಜನವರಿ 25ರಂದೇ ಯಾಕೆ?:*
1950 ರ ಜನವರಿ 25 ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 25 ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಮೊದಲ ಬಾರಿ 2011 ರಲ್ಲಿ ಆಚರಿಸಲಾಗಿತ್ತು. ಬಳಿಕ ಪ್ರತಿ ವರ್ಷ ಆಚರಿಸುತ್ತಾ ಬರಲಾಗಿದೆ. ಈ ವರ್ಷವೂ ಕೂಡ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ.
*ಆಚರಣೆಯ ಉದ್ದೇಶವೇನು?:*
ಮತದಾನಕ್ಕೆ ಅರ್ಹರಾದ ಯಾರೊಬ್ಬರು ಮತದಾನದಿಂದ ಹೊರಗುಳಿಯಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗವು 18 ವರ್ಷ ತುಂಬಿದ ಯುವ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ತಮ್ಮ ಮತವನ್ನು ಯಾರೂ ಮಾರಾಟ ಮಾಡಿಕೊಳ್ಳಬಾರದು. ಯುವ ಮತದಾರರು ತಮ್ಮ ಮನೆಯವರಿಗೆ ಹಾಗೂ ನೆರೆಹೊರೆಯವರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ಪ್ರೇರೇಪಿಸಬೇಕು.
ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ. ಭಾಷಣ ಸ್ಪರ್ಧೆ, ಮತದಾನ ಜಾಗೃತಿ ಅಭಿಯಾನ, ಮತದಾರರ ಗುರುತಿನ ಚೀಟಿ ವಿತರಣೆ, ಛಾಯಾಚಿತ್ರ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
*ಮತದಾನದ ಮಹತ್ವ :*
ಸಂವಿಧಾನ ಕಲ್ಪಿಸಿರುವ ಹಕ್ಕುಗಳಲ್ಲಿ ಮತದಾನ ಕೂಡ ಶ್ರೇಷ್ಠವಾಗಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒoದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಸದೃಢಗೊಳಿಸಲು ಮತ್ತು ಮತದಾರರು ಹೆಚ್ಚು ಪಾಲ್ಗೊಳ್ಳುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುವ ಚುನಾವಣಾ ಆಯೋಗಕ್ಕೆ ಕೃತಜ್ಞತೆಗಳು. ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ಜನ ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸಲು ಈ ದಿನ ನಮಗೆ ಸ್ಫೂರ್ತಿಯಾಗಲಿ. ಇದರಿಂದ ನಮ್ಮ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಲಿದೆ’
ಆದ್ದರಿಂದ ಮತದಾನದ ಮಹತ್ವ ಕುರಿತು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯುವ ಸಲುವಾಗಿ ಮತ ದಾನದ ಹಕ್ಕನ್ನು ಎಲ್ಲರೂ ಚಲಾಯಿಸಬೇಕು. ಇತ್ತೀಚೆಗೆ ದೇಶದ ಮತದಾನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಾಣಿಸಿಕೊಂಡಿದೆ. ಮತದಾನವು ಜನತೆಯು ಯಾವುದಾದರೂ ವಿಷಯ, ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ. ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ.
*ಮತದಾರರು ಪ್ರಜಾಪ್ರಭುತ್ವದ ಬುನಾದಿ:*
ಮತದಾನ ಎಂದರೆ ಒಪ್ಪಿಗೆಯಿಂದ ಕೊಡುವುದು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಬಹಳ ಮುಖ್ಯ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಮ್ಮ ಮತವನ್ನು ನಿರ್ಭೀತವಾಗಿ ನೈತಿಕವಾಗಿ ಚಲಾಯಿಸಿದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವದಡಿ ಸುಭದ್ರ ಸರ್ಕಾರ ರಚನೆ ಸಾಧ್ಯ.
*ಮತದಾನದಿಂದ ದೇಶದ ಭವಿಷ್ಯ ನಿರ್ಮಾಣ:*
ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭುವೆನಿಸಿದ್ದು, ದೇಶದ ಭವಿಷ್ಯ ನಿರ್ಣಯಕ್ಕೆ ಕಡ್ಡಾಯವಾಗಿ ಕೇವಲ ಒಂದು ಪ್ರಾಮಾಣಿಕ ಮತ ಚಲಾವಣೆಯಿಂದ ಮಾತ್ರ ಸಾಧ್ಯ. ಅಭಿವೃದ್ಧಿಯೊಂದಿಗೆ ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ನಾಯಕನ ಅಯ್ಕೆಯಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿದರೆ ಮಾತ್ರ ಪ್ರಜಾಪ್ರಭತ್ವದ ವ್ಯವಸ್ಥೆಗೆ ನಿಜವಾದ ಅರ್ಥ ಬರಲಿದೆ.
*ಆಮಿಷಕ್ಕೆ ಬಲಿಯಾಗಬೇಡಿ:*
ಭ್ರಷ್ಟಾಚಾರದ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿರುವ ಪ್ರಜಾಪ್ರಭುತ್ವವನ್ನು ಮುಕ್ತಗೊಳಿಸಬೇಕೆಂದರೆ ಶೇ 100 ರಷ್ಟು ಮತ ಚಲಾವಣೆಗೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಿಂದ ದೇಶದ ಗದ್ದುಗೆ ಏರುವ ಯಾವುದೇ ಚುನಾವಣೆಗೂ ಹಣ ಅಥವಾ ಯಾವುದೇ ಆಮಿಷದ ಒತ್ತಡಕ್ಕೆ ಮಣಿದು ಮತ ಚಲಾಯಿಸಬಾರದು.
*ಎಲ್ಲರಿಗೂ ಮತದ ಹಕ್ಕು, ಭಾರತದ ವಿಶೇಷ:*
ವಿದೇಶಗಳಲ್ಲಿ ಹಲವು ವರ್ಷಗಳ ಹಿಂದೆ ಕೆಲವರಿಗೆ ಮಾತ್ರವೇ ಮತದಾನ ಮಾಡುವ ಹಕ್ಕನ್ನು ನೀಡಲಾಗಿತ್ತು. ಆದರೆ ಭಾರತದಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಗಿದೆ. ಈ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು .
*ಜಾತಿ, ಧರ್ಮ, ಹಣ, ಅಂತಸ್ತು ಮೀರಿ ಮತದಾನ:*
ಮತದಾನದ ಸಮಯದಲ್ಲಿ ಪಕ್ಷಪಾತ ನಡೆಯಲು ಅವಕಾಶ ನೀಡಬಾರದು. ಜಾತಿ, ಧರ್ಮ, ಹಣ, ಅಂತಸ್ತು ಇವುಗಳು ಯಾವುದೂ ಜನರ ಮನಸ್ಸಿಗೆ ಬರಕೂಡದು.
ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾರರ ಸಕ್ರಿಯ ಅತ್ಯಗತ್ಯವಾಗಿದ್ದು ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ದಾನಗಳಿಗಿಂತ ಮತದಾನವು ಶ್ರೇಷ್ಠವಾದ ದಾನ. ಹಾಗಾಗಿ ತಪ್ಪದೆ ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಆದುದರಿಂದ ಪ್ರತೀ ಚುನಾವಣೆಯಲ್ಲೂ ಮತದಾನದ ಹಕ್ಕು ಹೊಂದಿರುವ ನಾವೆಲ್ಲರೂ ತಪ್ಪದೇ ಮತ ಚಲಾಯಿಸಿ ಉತ್ತಮ ಆಡಳಿತಕ್ಕೆ ಅನುವು ಮಾಡಿಕೊಡುವ ಮೂಲಕ ದೇಶದ ಭವಿಷ್ಯವನ್ನು ಉಜ್ವಲಗೊಳಿಸೋಣ.
No comments:
Post a Comment
If You Have any Doubts, let me Comment Here