Five Guarantee Schemes Implementation Committee Guidelines
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ , ಜಿಲ್ಲಾ, ತಾಲೂಕು ಮಟ್ಟದಲ್ಲಿ 'ಗ್ಯಾರಂಟಿ ಯೋಜನೆ' ಅನುಷ್ಠಾನ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ 'ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ', 'ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪಾಧಿಕಾರ' 'ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ' ಹಾಗೂ ಬಿ.ಬಿ.ಎಂ.ಪಿ. ಮಟ್ಟದಲ್ಲಿ ಬಿ.ಬಿ.ಎಂ.ಪಿ. ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ"ಗಳನ್ನು ರಚಿಸಲು ಆದೇಶಿಸಿದೆ.
ಏನಿದೆ ಆದೇಶದಲ್ಲಿ..?
ರಾಜ್ಯದ ಜಿಲ್ಲೆಗಳನ್ನು 5 ವಿಭಾಗಗಳನ್ನಾಗಿ ವಿಂಗಡಿಸಿ, ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಿಗೆ ಪ್ರತಿಯೊಂದು ವಿಭಾಗಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಸದಸ್ಯ ಕಾರ್ಯದರ್ಶಿಯವರು ಆದೇಶ ಹೊರಡಿಸುವುದು.
ಸದಸ್ಯ ಕಾರ್ಯದರ್ಶಿಯವರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಯವರನ್ನು ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡುವುದು.
ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸದಸ್ಯ ಕಾರ್ಯದರ್ಶಿರವರು ಸಕ್ಷಮ ಪ್ರಾಧಿಕಾರದ (ಸರ್ಕಾರದ) ಅನುಮೋದನೆ ಪಡೆದು ನೇಮಿಸತಕ್ಕದ್ದು.
ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಗಳು ಹಾಗೂ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಕಾರ್ಯಗಳು, ಜವಾಬ್ದಾರಿಗಳು, ಅಧಿಕಾರಿ/ಸಿಬ್ಬಂದಿಗಳ ನೇಮಕಾತಿ, ರಾಜೀನಾಮೆ, ಕಛೇರಿ ನಿರ್ವಹಣೆ, ಸವಲತ್ತು, ಗೌರವಧನ, ಭತ್ಯೆಗಳು ಹಾಗೂ ಇತರ ಯಾವುದೇ ಸಂಬಂಧಪಟ್ಟ ವಿಷಯಗಳ ಕುರಿತು ಸಕ್ಷಮ ಪ್ರಾಧಿಕಾರದ (ಸರ್ಕಾರದ) ಅನುಮೋದನೆಯೊಂದಿಗೆ ರಾಜ್ಯ ಮಟ್ಟದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಪ್ರತ್ಯೇಕವಾಗಿ ಆದೇಶ ಹೊರಡಿಸುವುದು.
ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಮುಖ ಜವಾಬ್ದಾರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯಾಗಿರುತ್ತದೆ ಹಾಗೂ ಈ ಪ್ರಾಧಿಕಾರವು ನೀತಿ ರಚನೆ, ಸುಧಾರಣಾ ಕ್ರಮಗಳು, ಅನುಷ್ಠಾನದಲ್ಲಿ ಸರಳೀಕರಣ ಹಾಗೂ ಸಮನ್ವಯತೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಸೂಚನೆ ನೀಡಿದೆ.
No comments:
Post a Comment
If You Have any Doubts, let me Comment Here