Hedding : Rules to be followed by students and parents during SSLC exam...
SSLC Exam 2023-24; ನಕಲು ತಡೆಗೆ ಮಾರ್ಗಸೂಚಿ ಪ್ರಕಟ
ಆಗಸ್ಟ್ 08; ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳ ರಚನೆ ಮತ್ತು ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕುರಿತಂತೆ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ದಿನಾಂಕ 01/07/2023ರಂದು ನಡೆದ ಸಭೆಯ ನಡಾವಳಿಯಂತೆ ಮಾರ್ಗಸೂಚಿ ಹೊರಡಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಈ ಪರೀಕ್ಷೆಯ ಒಂದು ದಿಕ್ಕೂಚಿಯಾಗಲಿದ್ದು, ವಿದ್ಯಾರ್ಥಿಗಳ ಮನಸ್ಥೆರ್ಯವನ್ನು ಗಟ್ಟಿಗೊಳಿಸುವ ಪರೀಕ್ಷೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಪಠ್ಯಾಂಶಗಳನ್ನು ಮನನವಾಗುವ ರೀತಿಯಲ್ಲಿ ಬೋಧಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಅಧ್ಯಯನಶೀಲರನ್ನಾಗಿಸಬೇಕಾಗಿದೆ ಎಂದು ಹೇಳಿದ್ದಾರೆ.
ಶಾಲಾ ಹಂತದಲ್ಲಿ ಘಟಕ ಪರೀಕ್ಷೆ, ರೂಪಣಾತ್ಮಕ, ಸಂಕಲನಾತ್ಮಕ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವುದರ ಜೊತೆಗೆ ಪ್ರಶ್ನೆ ಪತ್ರಿಕೆಯ ಮಾದರಿಗಳ ಪರಿಚಯ ಮತ್ತು ಪ್ರಶ್ನೆಗಳಿಗೆ ಉತ್ತರಿಸಬೇಕಾದ ಕ್ರಮ ಮುಂತಾದ ಅಂಶಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡುವಂತೆ ಸೂಕ್ತ ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
2023-245 ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮಂಡಳಿಯ ನಿರ್ವಹಿಸುವ ರೀತಿ- ರಿವಾಜುಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನಕಲಿಗೆ ಶಿಕ್ಷಕರು ಸಹಕರಿಸದಂತೆ ಹಾಗೂ ವಿದ್ಯಾರ್ಥಿಗಳು ನಕಲು ನಡೆಸದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕಾಗಿರುವುದು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಪರೀಕ್ಷಾ ಅಕ್ರಮ ತಡೆ; ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟುವುದು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸುವ ಕಾರ್ಯ ಸೇರಿದಂತೆ ಪರೀಕ್ಷೆ, ಅವ್ಯವಹಾರ ನಡೆಸದಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಜಾಗೃತಿ ಮೂಡಿಸುವ ಕಾರ್ಯ ಅತಿ ಜರೂರಾಗಿ ಆಗಬೇಕಾಗಿದೆ. ಆದ್ದರಿಂದ ಈ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸಿರುವ ಪರಿಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. ಕಡ್ಡಾಯ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಂಖ್ಯೆಯ ಕೊಠಡಿಗಳು, ಆಸನದ ವ್ಯವಸ್ಥೆಗಾಗಿ ಪೀಠೋಪಕರಣಗಳು, ಶಾಲೆಯ ಸುತ್ತ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರು, ಸಿಸಿಟಿವಿ ಕ್ಯಾಮರಾ ಅಳವಡಿಸಿರುವಿಕೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸೂಕ್ತ ಸಾರಿಗೆ ಸೌಲಭ್ಯ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ರಸ್ತೆ ಮಾರ್ಗ ಮುಂತಾದ ಎಲ್ಲಾ ಸೌಲಭ್ಯಗಳು ಇರುವ ಬಗ್ಗೆ, ಪರಿಶೀಲಿಸುವುದು ಅತ್ಯವಶ್ಯಕವಾಗಿದೆ.
* ಪ್ರತಿ ಕೊಂಡಿಗೆ 24 ವಿದ್ಯಾರ್ಥಿಗಳು ಮಾತ್ರ ಹಂಚಿಕೆಯಾಗುವಂತೆ, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 400 ರಿಂದ ಗರಿಷ್ಠ 800 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಯೆಯಿರುವ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಆಯ್ಕೆ ಮಾಡುವುದು.
2023ರಲ್ಲಿ ನಡೆದ ಎಸ್ ಎಸ್ ಎಲ್ ಸಿ. ಮುಖ್ಯ ಪರೀಕ್ಷೆಗೆ ರಾಜ್ಯದಾದ್ಯಂತ ಒಟ್ಟು 3305 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿತ್ತು. ಇದರಲ್ಲಿ ಜಿಲ್ಲಾ ಕೇಂದ್ರದಲ್ಲಿ 724, ತಾಲ್ಲೂಕು ಕೇಂದ್ರದಲ್ಲಿ 755, ಹೋಬಳಿ ಕೇಂದ್ರದಲ್ಲಿ 604 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ-1222 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿರುತ್ತದೆ. 2024ರ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗೆ ಸಾಧ್ಯವಾದಷ್ಟು ಕ್ಲಸ್ಟರ್‌ರಹಿತ/ ಸ್ವತಂತ್ರ ಪರೀಕ್ಷಾ ಕೇಂದ್ರಗಳನ್ನು ಕಡಿಮೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ರಚಿಸುವುದು.
* 10 ಕಿ. ಮೀ. ವ್ಯಾಪ್ತಿಯೊಳಗೆ 8-10 ಶಾಲೆಗಳನ್ನು ಸೇರಿಸಿ ಕ್ಲಸ್ಟರ್ ಹಂತದಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಪರೀಕ್ಷಾ ಕೇಂದ್ರವನ್ನು ರಚನೆ ಮಾಡುವುದು. ಶಾಲೆಯಲ್ಲಿನ ಎಲ್ಲಾ ಕೊಠಡಿಗಳು ಮತ್ತು ಶಾಲಾ ಕಾರಿಡಾರ್‌ಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿರುವ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸುವುದು. ಸಿಸಿಟಿವಿ ಕ್ಯಾಮರಾಗಳು ಪರೀಕ್ಷಾ ದಿನಗಳಲ್ಲಿ ದಿನದ 24 ಗಂಟೆಯಲ್ಲೂ ಕಾರ್ಯ ನಿರ್ವಹಿಸುವಂತಿರಬೇಕು.
ಪರೀಕ್ಷಾ ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಹುಮಹಡಿ ಕಟ್ಟಡವಿರುವ ಪರೀಕ್ಷಾ ಕೇಂದ್ರಗಳಲ್ಲಿ ಸಾಧ್ಯವಾದಷ್ಟು ಪರೀಕ್ಷೆಗೆ ನೆಲಮಹಡಿಯಲ್ಲಿ ಆಸನ ವ್ಯವಸ್ಥೆಯನ್ನು ಮಾಡದೇ ಮೊದಲನೇ ಮಹಡಿಯಿಂದ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡುವುದು. ಪರೀಕ್ಷಾ ಕೇಂದ್ರದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ನೆಲಮಹಡಿಯಲ್ಲಿ ಆಸನ ವ್ಯವಸ್ಥೆ ಮಾಡುವುದು.
* ಖಾಸಗಿ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ರಚಿಸದೇ ಸದರಿ ಅಭ್ಯರ್ಥಿಗಳನ್ನು ಸಾಮಾನ್ಯ (ರೆಗ್ಯುಲರ್) ಪರೀಕ್ಷಾ ಕೇಂದ್ರಗಳಿಗೆ ಹಂಚಿಕೆ ಮಾಡುವುದು. ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳನ್ನು ರಚಿಸುವುದರ ಮುಖಾಂತರ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವುದು. ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆಯಾದಷ್ಟು ಇಲಾಖೆಯ ಅಧಿಕಾರಿಗಳು ಉಸ್ತುವಾರಿ ಮಾಡಲು ಎಲ್ಲಾ ಹಂತದ ಅಧಿಕಾರಿಗಳು ನಿಗಾವಹಿಸಲು ಅನುಕೂಲವಾಗುತ್ತದೆ.
ನಕಲು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು
* ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ವಿದ್ಯಾರ್ಥಿಗಳು ಪಠ್ಯ ವಿಷಯಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಕಾಲಕಾಲಕ್ಕೆ ಶಾಲಾ ಹಂತದಲ್ಲಿ ನಡೆಸುವ ಘಟಕ ಪರೀಕ್ಷೆ ಕಿರು ಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ, ಹಾಗೂ ಸರಣಿ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ, ಪಾರದರ್ಶಕವಾಗಿ ನಡೆಸುವುದರ ಮೂಲಕ ಪರೀಕ್ಷೆಯಲ್ಲಿ ನಕಲು ತಡೆದು ಗುಣಮಟ್ಟದ ಫಲಿತಾಂಶ ಬರುವಂತೆ ಮಾಡಲು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ.
* ವಿದ್ಯಾರ್ಥಿಗಳ ಹಾಜರಾತಿ ಮತ್ತು ಕಲಿಕೆಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲು ವಿದ್ಯಾರ್ಥಿಗಳ ಪೋಷಕರು ಮತ್ತು ಎಸ್.ಡಿ.ಎಂ.ಸಿ. ಪದಾಧಿಕಾರಿಗಳ ಸಭೆಯನ್ನು ಕಾಲಕಾಲಕ್ಕೆ ಆಯೋಜನೆ ಮಾಡಿ, ಪರೀಕ್ಷೆಯಲ್ಲಿ ನಕಲು ಮಾಡುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು. ಜೊತೆಗೆ ಪರೀಕ್ಷೆಯಲ್ಲಿ ನಕಲು ತಡೆಯಲು ಶಾಲೆ ಮತ್ತು ಇಲಾಖೆ ಹಂತದಲ್ಲಿ ಕೈಗೊಂಡಿರುವ ಕ್ರಮಗಳನ್ನು ಮನದಟ್ಟು ಮಾಡಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಹಕಾರ ಕೋರುವುದು. ಹಾಗೆಯೇ ಪರೀಕ್ಷೆಯಲ್ಲಿ ನಕಲು ಮಾಡದಿರುವ ಬಗ್ಗೆ ವಿದ್ಯಾರ್ಥಿಗಳಿಂದ ಪ್ರತಿಜ್ಞೆಯನ್ನು ಮಾಡಿಸುವುದು. ಈ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಮಂಡಳಿಗೆ ಸಲ್ಲಿಸುವುದು. ಈ ವರದಿಯನ್ನು ಮಂಡಳಿಯ ಹಂತದಲ್ಲಿ ಕ್ರೋಢೀಕರಿಸಿ ಪ್ರತಿ ತಿಂಗಳು ಸಭೆಯನ್ನು ನಡೆಸಿ ಪರಿಶೀಲಿಸಲಾಗುವುದು.
ಶಾಲಾ ಹಂತದ ರೂಪಣಾತ್ಮಕ, ಸಂಕಲನಾತ್ಮಕ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಯಾವುದೇ ನಕಲು ನಡೆಯದಂತೆ ಕಟ್ಟುನಿಟ್ಟಾಗಿ ನಡೆಸುವುದು. ಶಿಕ್ಷಕರಿಗೆ ಕಾಲಕಾಲಕ್ಕೆ ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳನ್ನು ಸಮಯೋಚಿತವಾಗಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ಮಾಡುವುದು. ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಶಾಲೆ ಬಿಡದಂತೆ ಕ್ರಮವಹಿಸಿ, ಅಂತಹ ಮಕ್ಕಳಿಗೆ ನಿರಂತರವಾಗಿ ಶೈಕ್ಷಣಿಕ ಮಾರ್ಗದರ್ಶನ ನೀಡುವುದರ ಜೊತೆಗೆ ಆಪ್ತ ಸಮಾಲೋಚನೆಯನ್ನು ಮಾಡುವುದು. ಸದರಿ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಮಗುವಿನ ಕಲಿಕಾ ಮಟ್ಟವನ್ನು ತಿಳಿಸಿ, ಮಗುವಿನ ಕಲಿಕೆಯ ಬಗ್ಗೆ ನಿಗಾವಹಿಸುವಂತೆ ತಿಳಿಹೇಳುವುದು.
* ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯ ಶಿಕ್ಷಕರಿಗೆ ಪ್ರತಿ ಮಾಸಿಕ ಸಭೆಯನ್ನು ಆಯೋಜನೆ ಮಾಡುವುದು ಹಾಗೂ ಎಲ್ಲಾ ಪ್ರಮುಖ ವಿಷಯಗಳ ವಿಷಯ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುವುದು. ಹಾಗೆಯೇ ಪರೀಕ್ಷೆಯಲ್ಲಿ ನಕಲು ಮಾಡದಿರುವ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು.
* ನಕಲುರಹಿತವಾಗಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಸಭೆಯನ್ನು ಆಯೋಜನೆ ಮಾಡುವುದು. ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ತಾಲ್ಲೂಕು ಮತ್ತು ಜಿಲ್ಲಾ ಹಂತದ ಇತರೆ ಇಲಾಖೆಗಳ ಅಧಿಕಾರಿಗಳ ಸಹಕಾರ ಪಡೆಯಲು ಯೋಜನೆ ರೂಪಿಸುವುದು.
* ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ / ಮಾಹಿತಿ ನೀಡಲು ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸುವುದು. ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳು/ ಗೊಂದಲಗಳಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಮಾಹಿತಿ ಪಡೆಯಲು ಅನುಕೂಲವಾಗುವಂತೆ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಲಭ್ಯವಾಗುವಂತೆ ಕ್ರಮವಹಿಸುವುದು.
* ಜಿಲ್ಲಾ ಡಯಟ್ ಪ್ರಾಂಶುಪಾಲರು ತಮ್ಮ ಜಿಲ್ಲಾ ವ್ಯಾಪ್ತಿಯ ಪ್ರೌಢಶಾಲೆಗಳಿಗೆ ಭೇಟಿ ನೀಡಲು ಡಯಟ್‌ನ ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರುಗಳನ್ನು ನಿಯೋಜಿಸಿ ಶಿಕ್ಷಕರು ಬೋಧಿಸುವ ಪಾಠ ವೀಕ್ಷಣೆ ಮಾಡುವುದರ ಜೊತೆಗೆ ತರಗತಿ ಕೊಠಡಿಗಳಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ, ಮಕ್ಕಳ ಕಲಿಕಾ ಮಟ್ಟವನ್ನು ಖಾತರಿಪಡಿಸಿಕೊಳ್ಳುವುದು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಸುಧಾರಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವಂತೆ ಕ್ರಮವಹಿಸುವುದು.
No comments:
Post a Comment
If You Have any Doubts, let me Comment Here