NPS to OPS INFORMATION
ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ನೀಡಲು ಹಳೆಯ ಸ್ಕೀಮ್ ಜಾರಿ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಚಿವರು ಲೋಕಸಭೆಗೆ ಸ್ಪಷ್ಟಪಡಿಸಿದ್ದಾರೆ. ಹಳೆಯ ಪಿಂಚಣಿ ಸ್ಕೀಮ್ನಲ್ಲಿ ಸರ್ಕಾರಿ ನೌಕರರು ನಿವೃತ್ತರಾದಾಗ ಅವರ ಕೊನೆಯ ಸಂಬಳದ ಶೇ.50ರಷ್ಟು ಹಣವನ್ನು ಪಿಂಚಣಿ ಹಣವೆಂದು ನಿರ್ಧರಿಸಲಾಗುತ್ತಿತ್ತು. ಹೊಸ ಪಿಂಚಣಿ ಸ್ಕೀಮ್ನಲ್ಲಿ ಕನಿಷ್ಠ ಪಿಂಚಣಿ ಮೊತ್ತ ಎಂಬುದಿರುವುದಿಲ್ಲ. ಪೆನ್ಷನ್ ನಿಧಿಯಿಂದ ಹೂಡಿಕೆಯಾದ ಹಣಕ್ಕೆ ಬರುವ ರಿಟರ್ನ್ ಮೇಲೆ ಪೆನ್ಷನ್ ನಿರ್ಧಾರವಾಗುತ್ತದೆ.
ಸರ್ಕಾರಿ ಉದ್ಯೋಗಿಗಳಿಗೆ ಹಿಂದೆ ಜಾರಿಯಲ್ಲಿದ್ದ ಪಿಂಚಣಿ ಯೋಜನೆಗೆ (Old pension system) ಮರಳುವ ಯಾವ ಆಲೋಚನೆ ತನಗೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮೊನ್ನೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. '2004ರ ಜನವರಿ 1ರಂದು ಮತ್ತು ಆ ಬಳಿಕ ನೇಮಕವಾದ ಕೇಂದ್ರ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ' ಎಂದು ಸಚಿವರು ತಿಳಿಸಿದ್ದಾರೆ.
ಐದು ರಾಜ್ಯಗಳು ಓಲ್ಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹಳೆಯ ಪಿಂಚಣಿ ಯೋಜನೆ ಜಾರಿ ಸಾಧ್ಯತೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆದರೆ, ಈ ಸಾಧ್ಯತೆ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದರೊಂದಿಗೆ ಹೊಸ ಪಿಂಚಣಿ ಸ್ಕೀಮ್ ಆದ ನ್ಯಾಷನಲ್ ಪೆನ್ಷನ್ ಸಿಸ್ಟಂ (National Pension System) ಅನ್ನೇ ಸರ್ಕಾರಿ ಉದ್ಯೋಗಿಗಳಿಗೆ ಮುಂದುವರಿಸಲಾಗುತ್ತದೆ.
ಆದರೆ, ಎನ್ಪಿಎಸ್ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳೇನೆಂದು ಗುರುತಿಸಿ ಅದಕ್ಕೆ ಪರಿಹಾರ ಹುಡುಕಲು ಒಂದು ಸಮಿತಿ ರಚಿಸಲಾಗಿದೆ. ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಈ ಕಮಿಟಿ ನೇತೃತ್ವ ವಹಿಸಿದ್ದಾರೆ.
ಹಳೆಯ ಪೆನ್ಷನ್ ಸ್ಕೀಮ್ ಮತ್ತು ಹೊಸ ಪೆನ್ಷನ್ ಸ್ಕೀಮ್ ಮಧ್ಯೆ ಏನು ವ್ಯತ್ಯಾಸ?
ಹಳೆಯ ಪೆನ್ಷನ್ ಸ್ಕೀಮ್ ಆದ ಒಪಿಎಸ್ನಲ್ಲಿ ಸರ್ಕಾರಿ ಉದ್ಯೋಗಿ ನಿವೃತ್ತರಾದಾಗ ಅವರ ಕೊನೆಯ ಸಂಬಳದ ಶೇ. 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ನೀಡಲಾಗುತ್ತದೆ. ಸೇವೆಯಲ್ಲಿರುವಾಗ ಉದ್ಯೋಗಿಯ ಸಂಬಳದಲ್ಲಿ ಪಿಂಚಣಿಗಾಗಿ ಹಣವನ್ನು ಕಡಿತ ಮಾಡಲಾಗುತ್ತಿರಲಿಲ್ಲ.
ಹೊಸ ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಉದ್ಯೋಗಿಯ ಮೂಲ ವೇತನದ ಶೇ. 10ರಷ್ಟು ಹಣವನ್ನು ಕಡಿತ ಮಾಡಿ ಪೆನ್ಷನ್ ಫಂಡ್ಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಶೇ. 14ರಷ್ಟು ಕೊಡುಗೆ ನೀಡುತ್ತದೆ. ಈ ಹಣವನ್ನು ಸರ್ಕಾರದ ಸಾಲಪತ್ರಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಆದರೆ, ಪಿಂಚಣಿ ಹಣ ನಿರ್ದಿಷ್ಟವಾಗಿರುವುದಿಲ್ಲ. ಹೂಡಿಕೆಯಿಂದ ಸಿಗುವ ರಿಟರ್ನ್ ಮೇಲೆ ಪಿಂಚಣಿ ಮೊತ್ತ ನಿರ್ಧಾರಿತವಾಗಿರುತ್ತದೆ.
No comments:
Post a Comment
If You Have any Doubts, let me Comment Here