ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯದಂತಹ ಕಲಾವಿದೆ ಲೀಲಾವತಿ. 600 ಸಿನಿಮಾಗಳಲ್ಲಿ ನಟಿಸಿದ ಅವರ ಸಾಧನೆ ದೊಡ್ಡದು. ವೈಯಕ್ತಿಕ ಬದುಕಿನಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಅವರು ಅನೇಕರಿಗೆ ಮಾದರಿ ಆಗುವಂತೆ ಬೆಳೆದರು. ಇಂದು ಲೀಲಾವತಿ ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ.
ಆದರೆ ಅವರ ಕೆಲಸಗಳು ಶಾಶ್ವತ.
ನಟಿ ಲೀಲಾವತಿ (Leelavathi) ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗದ ಪಾಲಿಗೆ ತೀವ್ರ ನೋವಿನ ಸಂಗತಿ. ಅವರ ಅಗಲಿಕೆಯ (Leelavathi Death) ಸುದ್ದಿ ತಿಳಿದು ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅವರು ನೀಡಿದ ಕೊಡುಗೆ ಅಪಾರ. 'ಸಂತ ತುಕಾರಾಂ', 'ಭಕ್ತ ಕುಂಬಾರ', 'ಸಿಪಾಯಿ ರಾಮು', 'ವೀರ ಕೇಸರಿ' ಮುಂತಾದ ಸಿನಿಮಾಗಳ ಮೂಲಕ ಲೀಲಾವತಿ ಮೋಡಿ ಮಾಡಿದ್ದರು. ಡಾ. ರಾಜ್ಕುಮಾರ್ ಜೊತೆ 36 ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ರಾಜ್ಕುಮಾರ್ (Dr. Rajkumar) ಮತ್ತು ಲೀಲಾವತಿ ಅವರದ್ದು ಚಂದನವನದಲ್ಲಿ ಸೂಪರ್ ಹಿಟ್ ಜೋಡಿ. ಇಂದು ಲೀಲಾವತಿ ಅವರು ಭೌತಿಕವಾಗಿ ಇಲ್ಲದೇ ಇರಬಹುದು. ಆದರೆ ಸಿನಿಮಾಗಳ ಮೂಲಕ ಅವರು ಎಂದೆಂದಿಗೂ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.
ನಟಿ ಲೀಲಾವತಿ ಜೀವನ:
ಲೀಲಾವತಿ ಅವರು ಜನಿಸಿದ್ದು 1937ರ ಡಿಸೆಂಬರ್ 24ರಂದು. ಅವರ ಊರು ಮಂಗಳೂರು. ಕಡು ಬಡತನದಲ್ಲಿ ಹುಟ್ಟಿದವರು ಲೀಲಾವತಿ. ಹೆಣ್ಣು ಮಗು ಜನಿಸಿದೆ ಎಂದು ಅವರ ಕುಟುಂಬದವರು ಬೇಸರ ಮಾಡಿಕೊಂಡಿದ್ದರು. ಆದರೆ ಎಲ್ಲರೂ ಮೆಚ್ಚುವಂತಹ ಮಹಿಳೆಯಾಗಿ ಅವರು ಬೆಳೆದು ನಿಂತಿದ್ದು ವಿಶೇಷ. ಲೀಲಾವತಿ ಅವರು ಓದಿದ್ದು 2ನೇ ತರಗತಿವರೆಗೆ ಮಾತ್ರ. ಕಾರಣಾಂತರಗಳಿಂದ ಅವರು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಅವರಿವರ ಮನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಬಂತು. ನಂತರ ನಟನೆಯನ್ನು ವೃತ್ತಿಯಾಗಿಸಿಕೊಂಡರು.
ಲೀಲಾ ಕಿರಣ್ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು.
ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ 'ಭಕ್ತ ಪ್ರಹ್ಲಾದ'ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು.
ಲೀಲಾವತಿ ರಂಗಭೂಮಿ ಹಿನ್ನೆಲೆ:
ಚಿಕ್ಕ ವಯಸ್ಸಿನಲ್ಲೇ ಸಿನಿಮಾ ಮೇಲೆ ಲೀಲಾವತಿ ಅವರಿಗೆ ಆಸಕ್ತಿ ಮೂಡಿತ್ತು. ಚಿತ್ರರಂಗಕ್ಕೆ ಬಂದರೆ ಹಣ ಗಳಿಸಬಹುದು ಎಂದು ಲೀಲಾವತಿ ತೀರ್ಮಾನಿಸಿದರು. ಹಾಗಾಗಿ ನಟನೆ ಕಲಿಯಲು ಸುಬ್ಬಯ್ಯ ನಾಯ್ಡು ಅವರ ನಾಟಕದ ಕಂಪನಿಗೆ ಸೇರಿಕೊಂಡರು. ಅನೇಕ ನಾಟಕಗಳಲ್ಲಿ ಅವರು ನಟಿಸಿದರು. ನಂತರ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕವು. ಚೆನ್ನೈಗೆ ಹೋಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಮಗ ವಿನೋದ್ ರಾಜ್ ಜನಿಸಿದ ಬಳಿಕ ಬದುಕು ಕಷ್ಟ ಆಯಿತು. ಆದರೂ ಛಲ ಬಿಡದೇ ಅನೇಕ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡರು.
ಲೀಲಾವತಿ ನಟನೆಯ ಮೊದಲ ಸಿನಿಮಾ 1953ರಲ್ಲಿ ಬಂದ 'ಚಂಚಲ ಕುಮಾರಿ'. ಆ ಚಿತ್ರದಲ್ಲಿ ಅವರು ಚಿಕ್ಕದೊಂದು ಪಾತ್ರ ಮಾಡಿದ್ದರು. ನಂತರ ಅವರಿಗೆ ನಾಯಕಿ ಪಾತ್ರಗಳು ಸಿಕ್ಕವು. ಕನ್ನಡ, ತೆಲುಗು, ಮಲಯಾಳಂ, ತುಳು ಮುಂತಾದ ಭಾಷೆಗಳಲ್ಲಿ ನಟಿಸಿ ಲೀಲಾವತಿ ಫೇಮಸ್ ಆದರು. ಅವಕಾಶಗಳು ಕಡಿಮೆ ಆದಾಗ ಪೋಷಕ ಪಾತ್ರಗಳನ್ನೂ ಮಾಡಿ ಗಮನ ಸೆಳೆದರು. ಯಾವ ಪಾತ್ರ ಕೊಟ್ಟರೂ ನ್ಯಾಯ ಒದಗಿಸಬಲ್ಲ ನಟಿಯಾಗಿ ಅವರು ಗುರುತಿಸಿಕೊಂಡರು. ಚಿತ್ರರಂಗದಲ್ಲಿ ಫೇಮಸ್ ಆದ ನಂತರವೂ ಅವರು ನಾಟಕಗಳಲ್ಲಿ ನಟಿಸಿದರು.
ಲೀಲಾವತಿ ಪಡೆದ ಪ್ರಶಸ್ತಿಗಳು:
'ಮದುವೆ ಮಾಡಿನೋಡು' ಮತ್ತು 'ಸಂತ ತುಕಾರಾಮ್' ಸಿನಿಮಾಗಳಿಗೆ ಲೀಲಾವತಿ ಅವರು 2 ರಾಷ್ಟ್ರ ಪ್ರಶಸ್ತಿ ಪಡೆದರು. 'ತುಂಬಿದ ಕೊಡ', 'ಮಹಾತ್ಯಾಗ', 'ಭಕ್ತ ಕುಂಬಾರ', 'ಸಿಪಾಯಿ ರಾಮು', 'ಗೆಜ್ಜೆ ಪೂಜೆ' ಸಿನಿಮಾಗಳಲ್ಲಿನ ನಟನೆಗೆ ಅವರು ರಾಜ್ಯ ಪ್ರಶಸ್ತಿ ಪಡೆದರು. 'ಕನ್ನಡದ ಕಂದ' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೀವಮಾನ ಸಾಧನೆಗಾಗಿ ಲೀಲಾವತಿ ಅವರು 1999ರಲ್ಲಿ 'ಡಾ. ರಾಜ್ಕುಮಾರ್ ಪ್ರಶಸ್ತಿ' ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಲೀಲಾವತಿ ಅವರು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. 'ಅಷ್ಟಲಕ್ಷ್ಮಿ ಕಂಬೈನ್ಸ್', 'ಲೀಲಾವತಿ ಕಂಬೈನ್ಸ್' ಸಂಸ್ಥೆಗಳ ಮೂಲಕ 5 ಸಿನಿಮಾಗಳನ್ನು ಅವರು ನಿರ್ಮಿಸಿದ್ದರು.
No comments:
Post a Comment
If You Have any Doubts, let me Comment Here