Government Employees Cashless Treatment Updates
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ವಿಚಾರದಲ್ಲಿ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದಾರೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನ ಪರಿಷತ್‌ನಲ್ಲಿ ಪ್ರತಾಪ್ ಸಿಂಹ ನಾಯಕ್ ಕೆ. (ವಿಧಾನಸಭೆಯಿಂದ ಚುನಾಯಿತರಾದವರು) ಈ ಕುರಿತು ಕೇಳಿದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಗಳು ಉತ್ತರವನ್ನು ನೀಡಿದ್ದಾರೆ.
ಸದಸ್ಯರು ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಸೇವೆ ಕಲ್ಪಿಸುವ ಯೋಜನೆ ಜಾರಿಯಾಗಿದೆಯೇ? ಎಂದು ಕೇಳಿದ್ದರು. ಸದರಿ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಸಿಗುವ ವೈದ್ಯಕೀಯ ಸೇವೆಗಳು ಮತ್ತು ಸೌಲಭ್ಯಗಳ ವಿವರಗಳೇನು? ಎಂದು ಪ್ರಶ್ನೆ ಮಾಡಿದ್ದರು.
ಸದರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಉತ್ಕೃಷ್ಟ ವೈದ್ಯಕೀಯ ಸೇವೆ ಸಕಾಲದಲ್ಲಿ ಲಭ್ಯವಾಗುವಂತಾಗಲು ಸರ್ಕಾರ ರೂಪಿಸಿರುವ ನಿಯಮ ಹಾಗೂ ಮಾನದಂಡಗಳೇನು? ಎಂದು ವಿವರಣೆ ಕೇಳಿದ್ದರು.
ಮುಖ್ಯಮಂತ್ರಿಗಳ ಉತ್ತರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಉತ್ತರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರವು ರೂಪಿಸಿರುವ ನಗದು ರಹಿತ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಅನುಷ್ಠಾನಗೊಳಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
KASS ಯೋಜನೆಯಡಿ ಕೇಂದ್ರದ CGHS ವ್ಯವಸ್ಥೆಯಡಿ ಒಳಗೊಂಡಿರುವ ಚಿಕಿತ್ಸಾ ವಿಧಾನಗಳು, ವೈದ್ಯರ ಸಮಾಲೋಚನೆ, ವೈದ್ಯಕೀಯ ತಪಾಸಣೆಗಳು, ಶಸ್ತ್ರಚಿಕಿತ್ಸೆಗಳು, ವೈದ್ಯಕೀಯ ನಿರ್ವಹಣೆ ಮುಂತಾದ ವೈದ್ಯಕೀಯ ಸೇವೆಗಳು ಒಳಗೊಂಡಿರುತ್ತದೆ. ಈ ಯೋಜನೆಯಡಿಯ ವೈದ್ಯಕೀಯ ಸೇವೆಗಳು ಮತ್ತು ಸೌಲಭ್ಯಗಳನ್ನು ದಿನಾಂಕ 05/09/2022 ರ ಸರ್ಕಾರದ ಆದೇಶದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರವು ರೂಪಿಸಿರುವ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ಭಾಗವಾಗಿ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲ ಕಾಲಕ್ಕೆ ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಣೆ ನೀಡಿದ್ದಾರೆ.
ಅಲ್ಲದೇ, ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಭಾವಿತ ನೋಂದಾವಣೆಗೆ (Deemed Empanelment) ಒಳಪಡಿಸಲು ದಿನಾಂಕ 09/03/2023ರ ಸರ್ಕಾರದ ಆದೇಶದಲ್ಲಿ ಅನುಮತಿಸಲಾಗಿದೆ. ಈ ಯೋಜನೆಯಡಿ ನಗದು ರಹಿತ ಉತ್ಕೃಷ್ಟ ವೈದ್ಯಕೀಯ ಸೇವೆ ಸಕಾಲದಲ್ಲಿ ಲಭ್ಯವಾಗುವಂತಾಗಲು ಎಲ್ಲಾ ಅಂಶಗಳನ್ನು ಸಮಗ್ರವಾಗಿ ಒಳಗೊಂಡ ನೂತನ ಒಪ್ಪಂದ ವನ್ನು (MoU) ಖಾಸಗಿ ಆಸ್ಪತ್ರೆಗಳ ಜೊತೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ ಕಾರ್ಯವು ಪ್ರಗತಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಸದಸ್ಯರು ಸದರಿ ಯೋಜನೆಯು ಅನುಷ್ಠಾನಕ್ಕೆ ಬಂದ ನಂತರ ಇದುವರೆಗೆ ಎಷ್ಟು ಜನ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ನಗದು ರಹಿತ ವೈದ್ಯಕೀಯ ಸೇವೆ ಯೋಜನೆಯ ಲಾಭ ಪಡೆದಿದ್ದಾರೆ? ಮತ್ತು ಅದಕ್ಕೆ ಖರ್ಚಾಗಿರುವ ಅನುದಾನದ ವಿವರಗಳೇನು? ಎಂದು ಸಹ ಪ್ರಶ್ನೆ ಮಾಡಿದ್ದರು.
ಮುಖ್ಯಮಂತ್ರಿಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
No comments:
Post a Comment
If You Have any Doubts, let me Comment Here