Important action by Education Department to prevent copying in SSLC exam
SSLC ಪರೀಕ್ಷಾ ಕೇಂದ್ರಗಳ ಕೊಠಡಿ ಮೇಲ್ವಿಚಾರಕರಾಗಿ ಪ್ರೌಢಶಾಲಾ ಶಿಕ್ಷಕರನ್ನು ಬಳಸಿಕೊಳ್ಳದಿರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ(KSEAB) ನಿರ್ಧರಿಸಿದೆ.
ಪರೀಕ್ಷೆಗಳಲ್ಲಿ ನಕಲು ತಡೆಗೆ ಇದೇ ಮೊದಲ ಬಾರಿ ಹಲವು ಕ್ರಮಗಳನ್ನು ಜಾರಿಗೆ ತರಲು ರೂಪುರೇಷೆ ಸಿದ್ದಪಡಿಸಿರುವ ಮಂಡಳಿ, ಪ್ರಾಥಮಿಕ ಶಾಲಾ ಶಿಕ್ಷಕರನ್ನಷ್ಟೇ ಕೊಠಡಿ ಮೇಲ್ವಿಚಾರಕರಾಗಿ ನೇಮಿಸಿಕೊಳ್ಳಲು ತೀರ್ಮಾನಿಸಿದೆ.
ಇದುವರೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಪ್ರೌಢಶಾಲಾ ಶಿಕ್ಷಕರು ಕೊಠಡಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಒಂದು ಶಾಲೆಯ ಶಿಕ್ಷಕರನ್ನು ಬೇರೊಂದು ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗುತ್ತಿತ್ತು. ಶಿಕ್ಷಕರ ಕೊರತೆಯಾದಾಗ ಮಾತ್ರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿತ್ತು.
ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ನಕಲು ಪ್ರಕರಣಗಳ ಕುರಿತು ತನಿಖೆ ನಡೆಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು, ಕೊಠಡಿ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದ ಪ್ರೌಢಶಾಲಾ ಶಿಕ್ಷಕರೇ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ್ದನ್ನು ಪತ್ತೆಹಚ್ಚಿದ್ದರು. ಇಲಾಖೆಯ ಅಧಿಕಾರಿಗಳು ನೀಡಿದ ವರದಿ ಆಧಾರದಲ್ಲಿ ಮುಂದಿನ ಪರೀಕ್ಷೆಗಳಲ್ಲಿ ನಕಲು ನಡೆಯದಂತೆ ತಡೆಯಲು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುವ ನಿರ್ಧಾರಕ್ಕೆ ಮಂಡಳಿ ಬಂದಿದೆ. ಅಲ್ಲದೇ, ಒಂದು ಪ್ರೌಢಶಾಲೆಯ ಎಸ್‌ಡಿಎ, 'ಡಿ' ಗ್ರೂಪ್ ಸೇರಿದಂತೆ ಇತರೆ ಬೋಧಕೇತರ ಸಿಬ್ಬಂದಿಯನ್ನೂ ಕಡ್ಡಾಯವಾಗಿ ಅದೇ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸದಂತೆ ನಿಯಮ ರೂಪಿಸಲಾಗಿದೆ.
ಫಲಿತಾಂಶ ಹೆಚ್ಚಳದ ಒತ್ತಡವೇ ನಕಲಿಗೆ ಕಾರಣ
ಪ್ರತಿ ಜಿಲ್ಲೆಗಳು ಅಧಿಕ ಫಲಿತಾಂಶ ಪಡೆಯಬೇಕು. ಜಿಲ್ಲಾವಾರು ಫಲಿತಾಂಶದ ಪಟ್ಟಿಯಲ್ಲಿ ಮೇಲುಸ್ತರದಲ್ಲಿ ಇರಬೇಕು ಎಂದು ಪ್ರತಿ ಬಾರಿಯೂ ಗುರಿ ನಿಗದಿ ಮಾಡಲಾಗುತ್ತಿದೆ. ಕಡಿಮೆ ಫಲಿತಾಂಶ ಬಂದ ಶಾಲೆಗಳ ಶಿಕ್ಷಕರು, ಮುಖ್ಯ ಶಿಕ್ಷಕರ ವಿರುದ್ಧ ತೆಗೆದುಕೊಳ್ಳುತ್ತಿದ್ದ ಕ್ರಮಗಳೂ ನಕಲು ಹೆಚ್ಚಲು ಕಾರಣ ಎನ್ನುವುದು ವರದಿಯಲ್ಲಿ ಬಹಿರಂಗವಾಗಿದೆ. ಹಾಗಾಗಿ, ಫಲಿತಾಂಶ ವೃದ್ಧಿಗೆ ಒತ್ತಡ ಹಾಕದೇ ಉತ್ತಮ ಫಲಿತಾಂಶ ಪಡೆಯಲು ಅಗತ್ಯವಾದ ಯೋಜನೆಗಳನ್ನು ಅಳವಡಿಸಿಕೊಳ್ಳಲು ಹಾಗೂ ಪೋಷಕರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವತ್ತ ಗಮನ ಹರಿಸಲು ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಮೇಲೆ ಡ್ರೋನ್ ಕಣ್ಗಾವಲು.
ನಕಲು ತಡೆಯಲು ಇದುವರೆಗೂ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿತ್ತು. ಬಹುತೇಕ ಶಾಲೆಗಳಲ್ಲಿ ವಿದ್ಯುತ್ ವ್ಯತ್ಯಯ, ತಾಂತ್ರಿಕ ಸಮಸ್ಯೆಗಳಿಂದ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಬೂಬು ನೀಡಲಾಗುತ್ತಿತ್ತು. ಇದು ನಕಲು ಕಾರ್ಯಕ್ಕೆ ದಾರಿ ಮಾಡಿಕೊಟ್ಟಿತ್ತು. ಸಿಸಿಟಿವಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿಡುವ ಹೊಣೆಗಾರಿಕೆಯನ್ನು ಆಯಾ ಜಿಲ್ಲೆಯ ಉಪ ನಿರ್ದೇಶಕರು (ಡಿಡಿಪಿಐ), ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ನಿರ್ವಹಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳ ಮೇಲೆ ಡ್ರೋನ್ ಕಣ್ಗಾವಲು ಇಡಬೇಕು. ಪರೀಕ್ಷೆ ಆರಂಭವಾದ ದಿನದಿಂದ ಮುಗಿಯವವರೆಗೆ ಸ್ಥಳೀಯವಾಗಿ ಬಾಡಿಗೆಗೆ ಪಡೆಯಬೇಕು ಎಂದು ನಿಯಮ ರೂಪಿಸಲಾಗಿದೆ.
ಮಾಹಿತಿ ಮೂಲ: ಪ್ರಜಾವಾಣಿ ಪತ್ರಿಕೆ
No comments:
Post a Comment
If You Have any Doubts, let me Comment Here