ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದೇ ತಿಂಗಳು ಬಾಕಿ.. ಕೆಲವೇ ದಿನಗಳಲ್ಲಿ ಚುನಾವಣೆಗೆ ದಿನಾಂಕ ಘೋಷಣೆ ಆಗಲಿದೆ. ಒಂದು ಬಾರಿ ಚುನಾವಣೆಗೆ ದಿನಾಂಕ ಪ್ರಕಟ ಆಗುತ್ತಿದ್ದಂತೆಯೇ ಹಲವು ಬದಲಾವಣೆಗಳು ಆಗುತ್ತವೆ. ಈ ಎಲ್ಲಾ ಬದಲಾವಣೆಗಳಿಗೆ 'ಚುನಾವಣಾ ಮಾದರಿ ನೀತಿ ಸಂಹಿತೆ' ಎಂದು ಹೆಸರು..
ಚುನಾವಣಾ ಆಯೋಗ ರೂಪಿಸಿರುವ ನಿಯಮ ಇದು. ಚುನಾವಣೆಗೆ ದಿನಾಂಕ ಘೋಷಣೆ ಆದ ದಿನದಿಂದ ಹಿಡಿದು, ಮತ ಎಣಿಕೆ ಮುಗಿಯೋವರೆಗೆ ಈ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತೆ. ಈ ನೀತಿ ಸಂಹಿತೆ ಅಂದ್ರೆ ಏನು? ನಿಯಮಗಳು ಏನಿವೆ? ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಏನೆಲ್ಲಾ ನಿರ್ಬಂಧ ಇರುತ್ತೆ? ಇಲ್ಲಿದೆ ನೋಡಿ ಸಮಗ್ರ ವಿವರ.
ನೀತಿ ಸಂಹಿತೆ ಯಾರಿಗೆಲ್ಲಾ ಅನ್ವಯ?
ಚುನಾವಣೆಗೆ ದಿನಾಂಕ ನಿಗದಿ ಆದ ಕೂಡಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತೆ. ಈ ನೀತಿ ಸಂಹಿತೆ ಸರ್ಕಾರ, ಆಡಳಿತ ಸೇರಿದಂತೆ ಹಲವು ಕಡೆಗಳಿಗೆ ಅನ್ವಯ ಆಗಲಿದೆ. ಆಡಳಿತ, ವಿರೋಧ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತವೆ. ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು, ಸರ್ಕಾರದಿಂದ ಹಣಕಾಸಿನ ನೆರವನ್ನ ಪಡೆಯುವ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈ ಒಂದು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರ್ತಾರೆ.
ನೀತಿ ಸಂಹಿತೆ ಪ್ರಕಾರ ಏನು ಮಾಡುವಂತಿಲ್ಲ?
ಚುನಾವಣೆಗೆ ದಿನಾಂಕ ನಿಗದಿ ಆಗುವ ಮುನ್ನ ರಾಜಕಾರಣಿಗಳು ತರಾತುರಿಯಲ್ಲಿ ಯೋಜನೆಗಳ ಉದ್ಘಾಟನೆ ಮಾಡೋದು, ಶಂಕುಸ್ಥಾಪನೆ ಮಾಡೋದನ್ನ ನೋಡಿರ್ತೀರಿ.. ಇದಕ್ಕೆ ಕಾರಣ ಏನಂದ್ರೆ ಚುನಾವಣಾ ನೀತಿ ಸಂಹಿತೆ ಭಯ! ಹೌದು.. ಚುನಾವಣಾ ನೀತಿ ಸಂಹಿತೆ ಒಂದ್ಸಲ ಜಾರಿಗೆ ಬಂದ್ರೆ ಹಲವಾರು ನಿರ್ಬಂಧಗಳೂ ಕೂಡಾ ಜಾರಿಗೆ ಬಂದು ಬಿಡ್ತವೆ.. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ. ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ. ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ. ಹೊಸ ಯೋಜನೆಗೆ ಹಣ ನೀಡುವಂತಿಲ್ಲ. ಹೊಸ ಟೆಂಡರ್ ಕರೆಯುವಂತಿಲ್ಲ. ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಕೂಡಾ ಮಾಡಂಗಿಲ್ಲ.. ಎಲ್ಲಕ್ಕಿಂತಾ ಮುಖ್ಯವಾಗಿ ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ.ಅಧಿಕಾರಿಗಳ ಜೊತೆ ಸಭೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ. ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು. ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳು ಚುನಾವಣಾ ಪ್ರಚಾರಕ್ಕೆ ಬಳಕೆ ಆಗಬಾರದು. ಧರ್ಮ - ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತೆಯೇ ಇಲ್ಲ.
ನೀತಿ ಸಂಹಿತೆ ಅಡಿ ವಿನಾಯ್ತಿ ಇಲ್ವಾ?
ಒಂದ್ಸಲ ಚುನಾವಣ ನೀತಿ ಸಂಹಿತೆ ಜಾರಿಯಾಗಿ ಬಿಟ್ರೆ ಸರ್ಕಾರವನ್ನ ನಡೆಸೋದೇ ಕಷ್ಟ.. ಸರ್ಕಾರದ ಹತ್ರ ಇರೋ ಹಲವಾರು ಅಧಿಕಾರಗಳು ಕಟ್ ಆಗಿ ಬಿಡ್ತವೆ. ಹಾಗಂತಾ ಸಂಪೂರ್ಣ ನಿರ್ಬಂಧ ಏನೂ ಇರೋದಿಲ್ಲ. ಒಂದಷ್ಟು ವಿನಾಯ್ತಿಗಳೂ ಇರ್ತವೆ.. ನೀರಾವರಿ, ಲೋಕೋಪಯೋಗಿ ಸೇರಿದಂತೆ ಈಗಾಗಲೇ ಕೆಲವೊಂದು ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಅವನ್ನ ಮುಂದುವರೆಸಬಹುದು. ನೀತಿ ಸಂಹಿತೆ ಪ್ರಕಾರ ಯಾವುದೇ ಅಡ್ಡಿ ಇಲ್ಲ. ಇದಲ್ಲದೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಯಾವೆಲ್ಲಾ ಯೋಜನೆಗಳು ಈಗಾಗಲೇ ಜಾರಿಯಲ್ಲಿ ಇದ್ಯೋ ಅವೆಲ್ಲ ಕಾರ್ಯಕ್ರಮಗಳನ್ನೂ ಮುಂದುವರೆಸಬಹುದು. ಆದ್ರೆ, ಈ ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನ ಆಯ್ಕೆ ಮಾಡುವಂತಿಲ್ಲ ಅಷ್ಟೇ. ಇನ್ನು ರಾಜ್ಯ ಸರ್ಕಾರ ಸಂಪುಟ ಸಭೆ ನಡೆಸಬಹುದು, ಆದ್ರೆ, ಯಾವುದೆ ನಿರ್ಣಯ ಕೈಗೊಳ್ಳಬಾರದು! ಮತ್ತೇಕೆ ಸಭೆ ನಡೆಸಬೇಕು ಅಂತೀರಾ..? ಅದು ರಾಜಕಾರಣಿಗಳಿಗೆ ಬಿಟ್ಟಿದ್ದು.. ಇನ್ನು ಅಧಿಕಾರಿಗಳ ಜೊತೆ ಶಾಸಕರು ಸಂಸದರು ಸಭೆ ನಡೆಸಲೇಬೇಕು, ತುಂಬಾನೇ ಅಗತ್ಯ ಅನ್ನೋದಾದ್ರೆ ಚುನಾವಣಾ ಆಯೋಗದ ಅನುಮತಿ ಬೇಕೇ ಬೇಕು. ಶಾಸಕರು ಮತ್ತು ಸಚಿವರು ತಮ್ಮ ಅಧಿಕೃತ ಸರ್ಕಾರಿ ನಿವಾಸದಿಂದ ಕಚೇರಿಗೆ ಹೋಗೋದಕ್ಕೆ ಮಾತ್ರ ಸರ್ಕಾರಿ ವಾಹನ ಬಳಸಬಹುದು. ಇನ್ನು ಸಚಿವರು ಬೆಂಗಳೂರನ್ನು ಬಿಟ್ಟು ಹೊರಗಡೆ ಹೋಗೋದಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯಲೇ ಬೇಕು. ಸಚಿವರು, ಶಾಸಕರಿಗೆ ಕೆಲವೊಂದು ವಿನಾಯ್ತಿಗಳೂ ಇವೆ. ಬರ ಮತ್ತು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸೋದಕ್ಕೆ ಚುನಾವಣಾ ಆಯೋಗ ಅಡ್ಡಿ ಮಾಡಲ್ಲ. ಪರಿಹಾರ ಬಿಡುಗಡೆ ಮಾಡೋದಕ್ಕೂ ಅಡ್ಡ ಬರಲ್ಲ. ಕುಡಿಯುವ ನೀರು ಪೂರೈಕೆ ಮಾಡೋದಕ್ಕೆ, ಗೋಶಾಲೆ ತೆರೆಯೋದಕ್ಕೂ ನೀತಿ ಸಂಹಿತೆ ಅಡ್ಡಿ ಆಗಲ್ಲ. ಆದ್ರೆ, ಎಲ್ಲದಕ್ಕೂ ಚುನಾವಣಾ ಆಯೋಗದ ಅನುಮತಿ ಬೇಕೇ ಬೇಕು. ಇನ್ನು ಸೇತುವೆ, ರಸ್ತೆ ಸೇರಿದಂತೆ ಯಾವುದೇ ಕಾಮಗಾರಿ ಕೆಲಸ ಪೂರ್ಣ ಆದ್ದರೆ ಅಧಿಕಾರಿಗಳು ಉದ್ಘಾಟನೆ ಮಾಡಬಹುದು, ಸಾರ್ವಜನಿಕರ ಸೇವೆಗೆ ಅರ್ಪಣೆ ಮಾಡಬಹುದು..
ರಾಜಕಾರಣಿಗಳ ಪ್ರಚಾರಕ್ಕೂ ನೀತಿ ಸಂಹಿತೆ ಲಗಾಮು!
ರಾಜಕೀಯ ಪಕ್ಷಗಳು ಎಲೆಕ್ಷನ್ ಟೈಮಲ್ಲಿ ಹೆಂಗೆಲ್ಲಾ ಆಡ್ತವೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ.. ಹಂಗಾಗಿ ಚುನಾವಣಾ ಆಯೋಗ ನೀತಿ ಸಂಹಿತೆ ಹೆಸರಲ್ಲಿ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಲಗಾಮು ಹಾಕಿರುತ್ತೆ.. ಅದರಲ್ಲೂ ಬೇಕಾಬಿಟ್ಟಿ ಮಾತನಾಡುವ, ನಾಲಗೆ ಹರಿಬಿಡುವ ರಾಜಕಾರಣಿಗಳ ಬಾಲ ಕಟ್ ಮಾಡುತ್ತೆ.. ಒಬ್ಬ ರಾಜಕಾರಣಿ ಮತ್ತೊಬ್ಬ ರಾಜಕಾರಣಿಯ ಕೆಲಸ ಕಾರ್ಯಗಳ ಬಗ್ಗೆ ಟೀಕೆ - ಟಿಪ್ಪಣಿ ಮಾಡಬಹುದು. ಆದ್ರೆ, ವೈಯಕ್ತಿಕ ಟೀಕೆ ಹಾಗೂ ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂಥಾ ಹೇಳಿಕೆ ನೀಡಬಾರದು. ವೈಯಕ್ತಿಕ ನಿಂದನೆ ಅಥವಾ ಜಾತಿ ನಿಂದನೆ ಮಾಡಲೇ ಬಾರದು. ಸಭೆ ಸಮಾರಂಭ ನಡೆಸಬೇಕು ಅನ್ನೋದಾದ್ರೆ, ಕಾರ್ಯಕ್ರಮಕ್ಕೆ ಮೊದಲೇ ಪೊಲೀಸರ ಅನುಮತಿ ಪಡೆದಿರಬೇಕು. ಇನ್ನು ಚುನಾವಣೆಗೆ ಅಬ್ಬರದ ಪ್ರಚಾರ ನಡೆಸೋ ಹೆಸರಲ್ಲಿ ಜನರ ವೈಯಕ್ತಿಕ ಬದುಕು, ಖಾಸಗಿ ಬದುಕಿಗೆ ಧಕ್ಕೆ ತರಬಾರದು.
ಮಾಹಿತಿ ಸಂಗ್ರಹ
Information Source:
AIN Live News
No comments:
Post a Comment
If You Have any Doubts, let me Comment Here