Kanakadas Information In Kannada
ಕನಕದಾಸರು ಕೀರ್ತನೆಗಳು ಮತ್ತು ಉಗಾಭೋಗ (ಕನ್ನಡ ಭಾಷೆಯಲ್ಲಿ ಕರ್ನಾಟಕ ಸಂಗೀತ ಸಂಯೋಜನೆಗಳು), ಕಾವ್ಯ ಮುಂತಾದ ಕ್ಷೇತ್ರದಲ್ಲಿ ಬಹಳ ಪ್ರಸಿದ್ದಿ ಪಡೆದಿದ್ದಾರೆ. 1509 ರಲ್ಲಿ ಜನಿಸಿದ ಕನಕದಾಸರು. ಪ್ರಸಿದ್ದ ತತ್ವಜ್ಞಾನಿ, ಕವಿ ಮತ್ತು ಸಂಗೀತಗಾರರಾಗಿದ್ದಾರೆ. ಪ್ರತಿ ವರ್ಷ ಇವರ ಜನ್ಮದಿನವನ್ನು ಕನಕದಾಸರ ಜಯಂತಿ ಎಂದು ಕರ್ನಾಟಕ ರಾಜ್ಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಮಹಾನ್ ಸಂತರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಕರ್ನಾಟಕದಲ್ಲಿ ಪ್ರಾದೇಶಿಕ ಸಾರ್ವಜನಿಕ ರಜಾದಿನವೆಂದು ಸಹ ಘೋಷಿಸಲಾಗಿದೆ
ಆ ಕಾಲದ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ದಾಸಶ್ರೇಷ್ಠ ಕನಕದಾಸರು ಜನಿಸಿದ್ದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ, ಬೀರಪ್ಪ ಮತ್ತು ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದ್ದ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಈ ತಿಮ್ಮಪ್ಪ ನಾಯಕ ಕನಕನಾಗಿದ್ದು ನಂತರ. ಕನಕದಾಸನಾಗಿದ್ದು ಈಗ ಇತಿಹಾಸ.
ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ, ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕನಿಗೆ ಚಿನ್ನ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸರಾಗುತ್ತಾರೆ ಎಂದು ಇತಿಹಾಸ ಹೇಳುತ್ತದೆ.
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಅದರಲ್ಲಿ ಕನಕದಾಸರು ನಾಡು ಕಂಡ ಅಪ್ರತಿಮ ದಾಸರಾಗಿದ್ದು ದಾಸಶ್ರೇಷ್ಠರಲ್ಲಿ ಶ್ರೇಷ್ಠರಾದವರು ಎಂದೆನಿಸಿಕೊಂಡವರು. ಇಂತಹ ಕನಕದಾಸರು ಇಂದಿನ ವಿದ್ಯಮಾನಗಳನ್ನು ಐದು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದು ಅವರ ಕಾಲಜ್ಞಾನಕ್ಕೆ ಹಿಡಿದ ಕನ್ನಡಿ.
ಆ ಕಾಲದ ಸಾಹಿತ್ಯ ಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು. ದಾಸ ಪರಂಪರೆಯ 50ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರು, ಅವರು ಹಿಂದುಳಿದ ಜಾತಿಯಲ್ಲಿ ಹುಟ್ಟಿದವರು, ಆದರೆ, ಅವರು ಸಾಮಂತ ರಾಜರೋ ಪಾಳೆಯಗಾರರೋ ಆಗಿದ್ದುದರಿಂದ ಅವರಿಗೆ ಯುದ್ಧ ಮತ್ತು ಆಡಳಿತಗಳ ನೇರವಾದ ಅನುಭವವಿತ್ತು. ಅವರ ತವರು ನೆಲವಾದ ಕಾಗಿನೆಲೆಯಲ್ಲಿ ಇಂದಿಗೂ ಇರುವ ಆದಿಕೇಶವನ ಗುಡಿಯ ದೇವತೆಯಾದ ಕೇಶವನು ಅವರ ಆರಾಧ್ಯದೈವವಾಗಿದ್ದು ಅವರ ಅಂಕಿತವಾದ 'ಕಾಗಿನೆಲೆಯಾದಿಕೇಶವರಾಯ' ಎನ್ನುವುದು ಅಲ್ಲಿಂದಲೇ ಬಂದಿದೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ತಿರುಗಾಟಗಳು ಮತ್ತು ಮತಾಂಧರಾದ ಧಾರ್ಮಿಕ ಮುಖಂಡರೊಂದಿಗಿನ ಅವರ ಮುಖಾಮುಖಿಗಳು ಸಾಹಸ-ವಿಷಾದಗಳೀಂದ ಕೂಡಿವೆ. ಅವರ ಯಾತನೆಗಳು. ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಆದರೆ, ಮತಾಂಧರಾದ ಮೇಲುಜಾತಿಗಳವರು ಅವರ ಯೋಗ್ಯತೆಯನ್ನು ಪ್ರಶ್ನಿಸಿದರು. ಅವರು ಶ್ರೀವೈಷ್ಣವ ಸಿದ್ಧಾಂತವನ್ನು ಇಷ್ಟಪಟ್ಟಿದ್ದರೆಂಬ ಊಹಾಪೋಹಗಳಿವೆ. ಅದೇನೇ ಇರಲಿ, ದೈತ ತಾತ್ವಿಕತೆಯ ಮೂಲ ನೆಲೆಗಳಿಗೆ ಕೊಂಚವಾದರೂ ನಿಷ್ಠೆಯನ್ನು ತೋರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ, ಅವರ ಅನೇಕ ಕೀರ್ತನೆಗಳು ಆ ಧರ್ಮದ ಚೌಕಟ್ಟಿನಲ್ಲಿ ರಚಿತವಾಗಿವೆ. ಆದರೆ, ಅವರು ಅಂತರಂಗದ ಭಾವನೆಗಳಿಗೆ ಕಟ್ಟುಪಾಡಿಲ್ಲದೆ, ನುಡಿಗೊಡುವ ಅನೇಕ ಕೀರ್ತನೆಗಳನ್ನು ಹಾಡಿಕೊಂಡಿದ್ದಾರೆ. ಕನಕದಾಸರ ಕೀರ್ತನೆಗಳು ಈ ವ್ಯಥೆಯಿಂದ ಆರ್ದವಾಗಿದ್ದು, ಜಾತಿಪದ್ಧತಿಯ ಪರಿಣಾಮವಾದ ಅಸಮಾನತೆಯ ವಿರುದ್ಧ ಗಟ್ಟಿಯಾದ ದನಿಯೆತ್ತುತ್ತವೆ. ಅನೇಕ ಕೀರ್ತನೆಗಳು ದೈತಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ
ಇದೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ:
ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲೂ ಕೊಟ್ಟಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯ ಇವೆ. ಐದು ಮುಖ್ಯ ಕಾವ್ಯಕೃತಿಗಳ ವಿವರ ಹೀಗಿದೆ 1. ಮೋಹನತರಂಗಿಣಿ, 2. ನಳಚರಿತ್ರೆ, 3. ರಾಮಧಾನ್ಯ ಚರಿತೆ, 4. ಹರಿಭಕ್ತಿಸಾರ, 5. ನೃಸಿಂಹಸ್ತವ
ನಳಚರಿತೆ: ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿರುವ 'ನಳಚರಿತೆ' ಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಒಂದು ನೆಲೆಯಲ್ಲಿ ಇದು ನಿಜವಾದ ಪ್ರೇಮಿಗಳು ಎದುರಿಸುವ ಪಡಿಪಾಟಲುಗಳನ್ನು ನಿರೂಪಿಸುವುದರಿಂದಲೇ ಆತ್ಮೀಯವಾಗುತ್ತದೆ. ಮಹಾಭಾರತದಿಂದ ತೆಗೆದುಕೊಳ್ಳಲಾಗಿರುವ ಈ ಉಪಾಖ್ಯಾನವು ನಳ-ದಮಯಂತಿಯರ ಜೀವನವನ್ನು ಸರಳವಾದರೂ ಶಕ್ತಿಶಾಲಿಯಾದ ಶೈಲಿಯಲ್ಲಿ ನಿರೂಪಿಸುತ್ತದೆ. ಇ ದಂಪತಿಗಳು ಎದುರಿಸಿದ ಕಾಡು ಮತ್ತು ಕಾಳಿಚ್ಚುಗಳ ವರ್ಣನೆಯು ಬಹಳ ಸಹಜವಾಗಿದೆ. ಈ ಕಾವ್ಯವು ತನ್ನ ಅನೇಕ ಆಶಯಗಳನ್ನು ಜಾನಪದದಿಂದ ತೆಗೆದುಕೊಂಡಿದೆ. 'ನಳಚರಿತೆ" ಮುಖ್ಯವಾಗಿ ಮನುಷ್ಯಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ.
'ಮೋಹನತರಂಗಿಣಿ' ಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯ ಈ
ಕಾವ್ಯವು ಕೃಷ್ಣನ ಮೊಮ್ಮಗನಾದ ಅನಿರುದ್ಧ ಮತ್ತು ಬಾಣಾಸುರನ ಮಗಳಾದ ಉಷಾರ ಪ್ರಣಯಕಥೆಯನ್ನು ವಸ್ತುವಾಗಿ
ಹೊಂದಿದೆ. ಈ ಕಾವ್ಯವು ಕೂಡ ಯಾವುದೇ ಕೃಷ್ಣಕಥೆಯ ಮೂಲ ಆಕರಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣ ಮತ್ತು ಮಹಾಭಾರತಗಳಿಂದ ತನಗೆ ಅಗತ್ಯವಾದ ವಿವರಗಳನ್ನು ತೆಗೆದುಕೊಂಡಿದೆ. ಮನ್ಮಥನ ಹುಟ್ಟು, ಶಂಬರಾಸುರನ ವಧೆ, ಉಷಾ ಮತ್ತು ಅನಿರುದ್ಧರ ಪ್ರಣಯ, ಬಾಣಾಸುರವಧೆ ಮುಂತಾದವು ಈ ಕಾವ್ಯದ ಮುಖ್ಯ ಘಟನೆಗಳು. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ. ನಿಧಾನಗತಿಯ ಹಾಗೂ ಗೇಯತೆಯ ಕಡೆಗೆ ಒಲಿಯುವ ಸಾಂಗತ್ಯದ ಛಂದಸ್ಸು, ಈ ಕಾವ್ಯದ ವಸ್ತುವಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
'ರಾಮಧಾನ್ಯಚರಿತ್ರೆ'ಯು ಇಡೀ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಬಹಳ ಅನನ್ಯವಾದ ಕಾವ್ಯ. ಜಾತಿಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ದಾರುಣ ಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆ. ಅದು ಅಹಂಕಾರಿಯಾದ ಬತ್ತ ಮತ್ತು ವಿನಯದಿಂದ ತಲೆಬಾಗಿದ. ಜನಸಾಮಾನ್ಯರ ಆಹಾರವಾದ ನರೆದಲೆಗಳ ನಡುವೆ ನಡೆಯುವ ಕಾಲ್ಪನಿಕವಾದ ಮುಖಾಮುಖಿಯ ಕಥನ. ಅವರಿಬ್ಬರ ನಡುವೆ ಯಾರು ಶ್ರೇಷ್ಠರೆನ್ನುವ ವಿಷಯದಲ್ಲಿ ಜಗಳ ನಡೆಯುತ್ತದೆ. ಕೊನೆಯ ತೀರ್ಮಾನವನ್ನು ಕೊಡುವ ಕೆಲಸವನ್ನು ರಾಮನು ನಿರ್ವಹಿಸಬೇಕಾಗುತ್ತದೆ. ಅವನು ಒಂದು ಪರೀಕ್ಷೆಯನ್ನು ಮಾಡಿ ನರೆದಲೆಗದ ಪರವಾದ ತೀರ್ಮಾನವನ್ನು ಕೊಡುತ್ತಾನೆ. ಅದನ್ನು ರಾಗಿ ಎಂದು ಕರೆಯುತ್ತಾನೆ. (ರಾಘವ ಧಾನ್ಯ) ಈ ಕಾವ್ಯಕ್ಕೆ ಇರುವ ಸಾಂಕೇತಿಕ ಹಾಗೂ ಸಾಮಾಜಿಕವಾದ ಮಹತ್ವವನ್ನು ಕನ್ನಡ ಸಾಹಿತ್ಯದ ಪ್ರಧಾನಧಾರೆಯು ಗುರುತಿಸಿದ್ದು ಈಚೆಗೆ. ಹಿಂದುಳಿದ ವರ್ಗಗಳು ಮುಂದೆ ಬಂದಿದ್ದಕ್ಕೂ ಈ ಕಾವ್ಯದ ಮರುಹುಟ್ಟಿಗೂ ಇರುವ ಸಂಬಂಧವು ಕಾಕತಾಳೀಯವಲ್ಲ. ಈ ಕಾವ್ಯವನ್ನು ಅಂಚಿಗೆ ತಳ್ಳಿ, ಕಡಿಮೆ ಆಸ್ಫೋಟಕವಾದ ಕಾವ್ಯಗಳನ್ನು ಹೊಗಳಿರುವುದು. ಕನ್ನಡ ಸಾಹಿತ್ಯವಿಮರ್ಶೆಯ ಮಾನದಂಡಗಳ ಬಗ್ಗೆ, ಮುಖ್ಯವಾದ ಸತ್ಯಗಳನ್ನು ಹೇಳುತ್ತದೆ.
'ಕನಕನ ಮುಂಡಿಗೆಗಳು', ಒಗಟಿನ ಹೊರ ಆವರಣದೊಳಗೆ, ಮಹತ್ವದ ತಾತ್ವಿಕ ಸಂಗತಿಗಳನ್ನು ಹೊಂದಿರುವ, ಚಿಕ್ಕ ಗೇಯ ಕವಿತೆಗಳನ್ನು ಒಳಗೊಳ್ಳುತ್ತವೆ. ಇವುಗಳನ್ನು ಅರ್ಥ ಮಾಡಿಕೊಳ್ಳು ತಾಂತ್ರಿಕವಾದ ಪರಿಭಾಷೆಯ ನಿಕಟ ಪರಿಚಯ ಇರಬೇಕು.
'ಹರಿಭಕ್ತಸಾರ'ದಲ್ಲಿ ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿರುವ 110 ಪದ್ಯಗಳಿವೆ. ಅವು ಕನಕದಾಸರ ಜೀವನದೃಷ್ಟಿ ಮತ್ತು ನೈತಿಕ ನೆಲೆಗಟ್ಟನ್ನು ಬಹಳ ಭಾವನಾತ್ಮಕವೂ ಸರಳವೂ ಆದ ಶೈಲಿಯಲ್ಲಿ ಹೇಳುತ್ತದೆ.
ಕರ್ನಾಟಕ ಸರಕಾರದಿಂದ ಕನಕದಾಸರಿಗೆ ಗೌರವ ಸಲ್ಲಿಕೆ:
ಕರ್ನಾಟಕ ಸರ್ಕಾರ ಕನಕದಾಸರ ಜಯಂತಿ ಆಚರಣೆಯನ್ನು ಸರ್ಕಾರಿ ಆಚರಣೆಯನ್ನಾಗಿ 2008ರಲ್ಲಿ ಘೋಷಿಸಿತು. ಅಲ್ಲಿಂದೀಚೆಗೆ ಪ್ರತಿ ವರ್ಷ ಕನಕದಾಸ ಜಯಂತಿ ಅಧಿಕೃತವಾಗಿ ಸರ್ಕಾರವೇ ಆಚರಿಸುತ್ತ ಬಂದಿದೆ.
ಸಿನಿಮಾ ಆಗಿದೆ ಕನಕದಾಸ ಬದುಕಿನ ಚಿತ್ರ
ಡಾ. ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಸಿನಿಮಾ 1960ರಲ್ಲಿ ತೆರೆಕಂಡಿದೆ. ವೈ.ಆರ್. ಸ್ವಾಮಿ ಇದರ ನಿರ್ದೇಶಕರು. ಈ ಚಿತ್ರದಲ್ಲಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಬಹಳ ಜನಪ್ರಿಯ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕನಕದಾಸ ಸಂಶೋಧನಾ ಕೇಂಂದ್ರ
ಕನಕದಾಸರ ಬದುಕು ಬರೆಹ ಹಾಗೂ ಅವರ ತತ್ವಚಿಂತನೆಗಳ ಅಧ್ಯಯನ ಹಾಗೂ ಪ್ರಸರಣ, ಪ್ರಕಟಣೆಯ ಉದ್ದೇಶದಿಂದ ಕರ್ನಾಟಕ ಸರಕಾರ 2003ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 10ಲಕ್ಷ ಮೂಲನಿಧಿಯನ್ನಿಟ್ಟು ಕನಕದಾಸರ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಿತ್ತು. 2008ರಲ್ಲಿ ಕರ್ನಾಟಕ ಸರಕಾರ ಒಂದು ಕೋಟಿ ರೂಪಾಯಿ ಮೊತ್ತದ ಮೂಲನಿಧಿಯನ್ನಿಟ್ಟು ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ 'ಕನಕದಾಸ ಸಂಶೋಧನ' ಕೇಂದ್ರವನ್ನು ಸ್ಥಾಪಿಸಿತು
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು ಪ್ರಾಧಿಕಾರ ಕನಕದಾಸರ ಜೀವನಗಾಥೆ ಸಾರುವ ಸ್ಮಾರಕಗಳನ್ನ ರಕ್ಷಿಸುತ್ತಿದೆ. ಕನಕದಾಸ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಕನಕದಾಸರ ಜನ್ಮಭೂಮಿ ಬಾಡ ಮತ್ತು ಕರ್ಮಭೂಮಿ ಕಾಗಿನೆಲೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ. ಬಾಡದಲ್ಲಿ ಕನಕದಾಸರ ಆರಮನೆ ನಿರ್ಮಾಣವಾಗಿದ್ದರೆ, ಕಾಗಿನೆಲೆಯಲ್ಲಿ ಪರಿಸರ ಉದ್ಯಾನವನ, ಕಾಗಿನೆಲೆ ದ್ವಾರಗೋಪುರ, ಕನಕದಾಸರ ಗದ್ದುಗೆ ಕನಕ ಚೆನ್ನಕೇಶವ ದೇವಸ್ಥಾನ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಕಾಗಿನೆಲೆ ಮತ್ತು ಬಾಡ ಗ್ರಾಮಗಳನ್ನು ಪ್ರವಾಸಿತಾಣವಾಗಿಸಲು ಪ್ರಾಧಿಕಾರ ಶ್ರಮಿಸುತ್ತಿದೆ. ಸೌಹಾರ್ದತೆ, ಸಮಾನತೆ, ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಕನಕದಾಸರ ತತ್ತೋಪದೇಶಗಳು ಬದುಕಿಗೆ ದಾರಿದೀಪ ಅನ್ನೋದರಲ್ಲಿ ಎರಡು ಮಾತಿಲ್ಲ.
ಒಟ್ಟಂದದಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಅವರ ಕಾವ್ಯ ಮತ್ತು ಜೀವನಗಳು ಸ್ಫೂರ್ತಿದಾಯಕವಾಗಿವೆ. ಏಕೆಂದರೆ, ಇಂದು ಹಿಂದುಳಿದ ವರ್ಗಗಳ ಕಲಾಪ್ರತಿಭೆ ಮತ್ತು ಸಾರ್ವಜನಿಕ ಸಮ್ಮತಿಯನ್ನು ಪಡೆಯುವ ಅವರ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ. ಕನಕದಾಸರು 1609 ರಲ್ಲಿ ಕಾಗಿನೆಲೆಯಲ್ಲಿ ಇಹಲೋಕ ತ್ಯಜಿಸಿದರು. ಸಮಾಜದ ಒಳಿತಿಗಾಗಿ ಅವರು ಮಾಡಿದ ಸೇವೆ ಕಂಡು ಕಾಗಿನೆಲೆಯಲ್ಲಿ ಅವರ ಗದ್ದುಗೆ ಕೂಡ ನಿರ್ಮಿಸಲಾಗಿದೆ. ಅಂದು ಕನಕದಾಸರು ರಚಿಸಿದ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾಗಿವೆ. ಅವರು ಕಾಗಿನೆಲೆ ಅಧಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.
No comments:
Post a Comment
If You Have any Doubts, let me Comment Here