JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, October 23, 2024

Kittur Rani Chennamma

  Jnyanabhandar       Wednesday, October 23, 2024
ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ 

*ಅಕ್ಟೋಬರ್ 23-🇮🇳ಕಿತ್ತೂರು ರಾಣಿ ಚೆನ್ನಮ್ಮ🇮🇳 ಜಯಂತಿಯಂದು ಗೌರವಪೂರ್ವಕ ನಮನಗಳು:*
ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡಿಗರ ತಾಯಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ವೀರ ನಾರಿ ಕಿತ್ತೂರು ಚೆನ್ನಮ್ಮ ಎಂದೆಂದಿಗೂ ಸ್ಮರಣೀಯ.
ಸ್ವಾತಂತ್ಯಕ್ಕಾಗಿ ಬ್ರಿಟಿಷರ ಬೃಹತ್ ಸೈನ್ಯದ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಆಕೆಯ ಧೈರ್ಯ, ಸಾಹಸ, ಕೆಚ್ಚು ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ. 
ಕಿತ್ತೂರು ಚೆನ್ನಮ್ಮ ಹುಟ್ಟಿದ್ದು ೨೩ನೇ ಅಕ್ಟೋಬರ್ ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚೆನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ,ಸಂಗೊಳ್ಳಿ ರಾಯಣ್ಣ ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟ ಕಟ್ಟಿದಳು.
ಕಿತ್ತೂರು ಚೆನ್ನಮ್ಮ ಅವರು 1778 ರ ಅಕ್ಟೋಬರ್ 23 ರಂದು ಭಾರತದ ಕರ್ನಾಟಕದ ಪ್ರಸ್ತುತ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಆಕೆ ಚಿಕ್ಕಂದಿನಿಂದಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದಳು. ಅವರು ದೇಸಾಯಿ ಮನೆತನದ ರಾಜಾ ಮಲ್ಲಸರ್ಜ ಅವರನ್ನು 15 ನೇ ವಯಸ್ಸಿನಲ್ಲಿ ವಿವಾಹವಾದರು.
ದಿಟ್ಟ ಹೋರಾಟದ ನಂತರ 1824ರ ಡಿಸೆಂಬರ್ 5ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಹಾಗೂ ಜಾನಕಿಬಾಯಿಯರ ಜೊತೆ ಕೈದಿಯಾದರು. ಡಿಸೆಂಬರ್ 12ರಂದು ಚೆನ್ನಮ್ಮ ಹಾಗೂ ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಯಿತು.ಅಲ್ಲಿ 4 ವರ್ಷ ಸೆರೆಮನೆವಾಸ ಅನುಭವಿಸಿ 1829ರ ಫೆಬ್ರುವರಿ 02ರಂದು ನಿಧನರಾದರು.



ಕಿತ್ತೂರು ವಿಜಯೋತ್ಸವ

ನೆಲದಲ್ಲಿ ಬ್ರಿಟಿಷರ ಎದುರು ನಡೆದ ಕಿತ್ತೂರಿನ ಯುದ್ಧಕ್ಕೆ ಈಗ 200 ವರ್ಷಗಳಾಗುತ್ತಿವೆ (23 ಅಕ್ಟೋಬರ್‌ 1824). ಈ ಎರಡು ನೂರು ವರ್ಷಗಳಲ್ಲಿ ದೇಶದಲ್ಲಿ ಏನೆಲ್ಲ ಘಟಿಸಿವೆ. ರಾಜಪ್ರಭುತ್ವಗಳು ಇಲ್ಲವಾಗಿ ಪ್ರಜಾಪ್ರಭುತ್ವ ನಮ್ಮದಾಗಿದೆ. ಆದರೆ ಕಿತ್ತೂರಿನ ಇತಿಹಾಸವನ್ನು ನಾವು ಸುಸಂಬದ್ಧವಾಗಿ ಕಾಲಾನುಕ್ರಮದಲ್ಲಿ ದಾಖಲೆ ಸಹಿತ ಹೇಳುವಂತೆ ಇತಿಹಾಸ ರಚನೆಗೊಂಡಿಲ್ಲ.

ಏನಿದ್ದರೂ ನಾವು ಲಾವಣಿಗಳ ಮೂಲಕ, ಜನಪದರ ಹಾಡುಗಳ ಮೂಲಕ, ತೋಂಡಿ ಸಂಪ್ರದಾಯದ ಕಥೆಗಳ ಮೂಲಕ ಆ ಇತಿಹಾಸವನ್ನು ಕಟ್ಟಿಕೊಳ್ಳಬೇಕಾಗಿದೆ. ಬಹು ಇತಿಹಾಸ ಪಠ್ಯಗಳು ಗೊಂದಲವನ್ನೂ ಸೃಷ್ಟಿಸಿವೆ. ಹಾಗಾಗಿ ಸತ್ಯಕ್ಕೆ ಹತ್ತಿರವಿರುವ ಜನಪದ ಸಾಹಿತ್ಯ, ಲಾವಣಿ ಹಾಡುಗಳನ್ನೇ ಆಕರ ಮಾಡಿಕೊಳ್ಳಬೇಕಾಗಿದೆ.

ಕೆಂಗಣ್ಣಿಗೆ ಗುರಿಯಾದ ದತ್ತು ಮಕ್ಕಳ ಕಾಯ್ದೆ
ಭಾರತದ ಸಣ್ಣ ಪುಟ್ಟ ದೇಸಗತ್ತಿ ಮತ್ತು ರಾಜಸತ್ತೆಗಳಿಂದ ಮೊದಲುಗೊಂಡು ದೊಡ್ಡ ದೊಡ್ಡ ರಾಜವಂಶಗಳು ಆಗಿನ ಬ್ರಿಟಿಷರ ವಿರುದ್ಧ ಸಣ್ಣದಾಗಿ ಬಂಡಾಯ ಏಳುತ್ತಿದ್ದ ಕಾಲವದು. ಬ್ರಿಟಿಷರಿಗೆ ಕಪ್ಪು ಕಾಣಿಕೆ ಕೊಡುವ ವಿಚಾರ, ಅವರ ಕಾಯ್ದೆಗಳು ಒಪ್ಪಿತವಾಗದೆ ಇರುವುದು ಈ ಬಂಡಾಯಗಳಿಗೆ ಕಾರಣವಾಗಿತ್ತು. ಒಂದೊಮ್ಮೆ ಬ್ರಿಟಿಷ್‌ ಪ್ರಭುತ್ವಕ್ಕೆ ಹತ್ತಿರವಾಗಿ ತಮ್ಮ ರಾಜಕೀಯ ಜೀವನ ನಡೆಸುತ್ತಿದ್ದ ಈ ಅರಸೊತ್ತಿಗೆಗಳು ಬ್ರಿಟಿಷರ ಇಬ್ಬಗೆಯ ನೀತಿಗೆ ವಿರುದ್ಧವಾಗಿ ಬಹಿರಂಗವಾಗಿಯೇ ತೊಡೆತಟ್ಟಿ ಯುದ್ಧದ ಆಹ್ವಾನ ಕೊಡತೊಡಗಿದವು. ಉತ್ತರ ಭಾರತದಲ್ಲಿ ಆರಂಭವಾದ ಈ ಹೋರಾಟ ದಕ್ಷಿಣದ ರಾಜ್ಯಗಳಿಗೂ ಹಬ್ಬಿತು. “ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಬ್ರಿಟಿಷರ ಕಾಯ್ದೆಯನ್ನು ದತ್ತು ಸ್ವೀಕರಿಸಿ ರಾಜ್ಯಭಾರವನ್ನು ಮಾಡುತ್ತಿದ್ದ ದೇಶೀ ರಾಜ ಪ್ರಭುತ್ವಗಳು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದವು. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರಿಂದ ಆರಂಭವಾದ ಈ ಹೋರಾಟ ದಕ್ಷಿಣದ ಕಿತ್ತೂರಿಗೂ ತಲುಪಿತು.

ಆಗ ಕಿತ್ತೂರನ್ನು ದೊರೆ ಮಲ್ಲಸರ್ಜ ಆಳುತ್ತಿದ್ದ. ಅವರ ಪಟ್ಟದ ರಾಣಿ ರಾಜಮಾತೆ ರುದ್ರಮ್ಮ ಮತ್ತು ಯುವರಾಜ ಶಿವಲಿಂಗರುದ್ರ ಸರ್ಜ. ನೆಮ್ಮದಿಯ ರಾಜ್ಯಭಾರ ನಡೆಸುತ್ತಿದ್ದ ಕಾಲದಲ್ಲೇ ದೊರೆ ಮಲ್ಲಸರ್ಜ ಕಾಕತಿಯ ಚೆನ್ನಮ್ಮಳನ್ನು ಎರಡನೆಯ ಮದುವೆಯಾಗಿ ಕಿತ್ತೂರಿಗೆ ಕರೆತಂದ. ಚೆನ್ನಮ್ಮ ಪಟ್ಟದ ರಾಣಿಯಾಗಿರದಿದ್ದರೂ ರಾಜ್ಯದ ಆಗುಹೋಗುಗಳನ್ನು ನಿಧಾನವಾಗಿ, ಧೈರ್ಯ ಸಾಹಸಗಳಿಂದ ಮುನ್ನೆಡೆಸುತ್ತ ಮಹಾರಾಣಿ ರುದ್ರಮ್ಮರಿಗೆ, ಮಲ್ಲಸರ್ಜ ದೊರೆಗೆ ಹಾಗೂ ಕಿತ್ತೂರಿನ ನಾಡ ಜನತೆಗೆ ಅಚ್ಚು ಮೆಚ್ಚಿನವಳಾದಳು.

ಹೀಗಿರುವಾಗ ಯುವರಾಜ ಶಿವಲಿಂಗರುದ್ರ ಸರ್ಜ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ. ಈಗ ಕಿತ್ತೂರಿಗೆ ಉತ್ತರಾಧಿಕಾರಿ ಯಾರು? ಸಮಸ್ಯೆ ಉದ್ಭವಿಸಿತು. ಆಗ ಚೆನ್ನಮ್ಮ ದತ್ತು ಸ್ವೀಕರಿಸಲು ಮುಂದಾದಳು. ಇದು ಬ್ರಿಟಿಷರಿಗೆ ಸಹಿಸದ ವಿಚಾರವಾಯಿತು. ಆಗ ಕಿತ್ತೂರು ಬ್ರಿಟಿಷರೊಂದಿಗೆ ಹಾಗೂ ನೆರೆಯ ಮರಾಠಾ ಪೇಶ್ವೆಗಳೊಂದಿಗೆ ಹಗೆತನ ಹೊಂದಿತ್ತು. ಮಲ್ಲಸರ್ಜ ದೊರೆಯನ್ನು ಮೋಸದಿಂದ ಪೇಶ್ವೆಗಳು ಸೆರೆ ಹಿಡಿದು ಗೃಹ ಬಂಧನದಲ್ಲಿ ಇಟ್ಟಿದ್ದರು. ಆಗಿನ ಮಂತ್ರಿಗಳಾಗಿದ್ದ ಸರ್ದಾರ ಗುರುಸಿದ್ಧಪ್ಪ ಹಾಗೂ ಯೋಧ ಅಮಟೂರ ಬಾಳಪ್ಪ ಪೇಶ್ವಗಳಿಂದ ದೊರೆ ಮಲ್ಲಸರ್ಜನನ್ನು ಬಿಡಿಸಿಕೊಂಡು ಬಂದಿದ್ದರು.

ಕಿತ್ತೂರು ವೀರ ಯೋಧರ ಪಡೆ
ಮಂತ್ರಿ ಸರ್ದಾರ ಗುರುಸಿದ್ದಪ್ಪ ಮತ್ತು ರಾಣಿ ಚೆನ್ನಮ್ಮ ಸೇರಿ ಕಿತ್ತೂರಿನಲ್ಲಿ ಸುಸಜ್ಜಿತ ಸೈನ್ಯ ಕಟ್ಟಿದರು. ಮಹಾಗುರಿಕಾರ ಅಮಟೂರ ಬಾಳಪ್ಪ, ಅಮಟೂರಿನ ಮತ್ತೋರ್ವ ಯೋಧ ಬಿಚ್ಚುಗತ್ತಿ ಚೆನ್ನಬಸಪ್ಪ, ವಡ್ಡರ ಯಲ್ಲಣ್ಣ, ಸಂಗೊಳ್ಳಿ ರಾಯಣ್ಣ, ಅಶ್ವದಳದ ಮುಖ್ಯಸ್ಥನಾಗಿದ್ದ ಹಿಮ್ಮತ್‌ ಸಿಂಗ್ರಂಥ ಧೈರ್ಯಶಾಲಿಗಳು, ಕೆಚ್ಚೆದೆಯ ಹೋರಾಟಗಾರರು ಕಿತ್ತೂರಿನ ಸೈನ್ಯಕ್ಕೆ ಬಲ ತುಂಬಿದ್ದರು. ಆದರೆ ನಮ್ಮವರಿಂದಲೇ ಮೋಸವಾಗುತ್ತಿದ್ದ ಕಾರಣ ಕಿತ್ತೂರ ಸಂಸ್ಥಾನ ಸದಾ ಆತಂಕ ಎದುರಿಸುತ್ತಿತ್ತು.

ಮುಂದೆ ಮಲ್ಲಸರ್ಜ ದೊರೆ ಕೆಲವೇ ದಿನಗಳಲ್ಲಿ ವಿಧಿವಶರಾದರು. ಒಂದು ಕಡೆ ದೊರೆಯಿಲ್ಲದ ರಾಜ್ಯ, ಇನೊಂದೆಡೆ ಬ್ರಿಟಿಷರ ಉಪಟಳ… ಚೆನ್ನಮ್ಮ ಸೈನ್ಯ ಬಲಗೊಳಿಸಲು ಸಜ್ಜಾದಳು. ಶಸ್ತ್ರಾಗಾರದ ಅಭಿಯೋಜಕರು, ಕೋಟೆ ಕಾಯುವ ಕಿಲ್ಲೆದಾರರು, ಖಜಾನೆ ಉಸ್ತುವಾರಿಗಳು, ಗೋಲಂದಾಜರು, ಮದ್ದು ಗುಂಡುಗಳನ್ನು ತಯಾರಿಸುವ ಮದ್ದು ಕಾಯುವ ತೋಪಖಾನೆಯವರು, ಅಶ್ವದಳದ ಮುಖ್ಯಸ್ಥರು, ತರಬೇತುದಾರರು, ಕುದುರೆಗಳನ್ನು ಸಾಕುವ ಹುಲ್ಸಾರ ಮತ್ತು ಕಾತ್ಸಾರಗಳು… ಹೀಗೆ ಬಲಾಡ್ಯ ಸೈನ್ಯ ಸಜ್ಜುಗೊಂಡಿತು. ಅದಕ್ಕೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಚೆನ್ನಬಸಪ್ಪ, ವಡ್ಡರ ಯಲ್ಲಣ್ಣ, ಹಿಮ್ಮತ್‌ ಸಿಂಗ್‌… ಹೀಗೆ ಶೂರ ಕಲಿಗಳು ಒಂದೊಂದು ವಿಭಾಗದ ನೇತೃತ್ವ ವಹಿಸಿಸಿದ್ದರು. ಇದರೊಂದಿಗೆ ಕಿತ್ತೂರು ಮತ್ತದರ ಸುತ್ತಮುತ್ತಲಿನ ವೀರ ಯುವಕರೂ ಸೈನ್ಯದಲ್ಲಿ ಸೇರ್ಪಡೆಗೊಂಡರು. ಕಿತ್ತೂರು ಈಗ ಅಭೇದ್ಯ ಕೋಟೆಯಾಯಿತು.

ಥ್ಯಾಕರೆ ಬಲಿಪಡೆದ ಬಾಳಪ್ಪ
ಆಗ ಸೇಂಟ್‌ ಜಾನ್‌ ಥ್ಯಾಕರೆ ಆಗ ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ. ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಕಿತ್ತೂರಿನ ಸಂಸ್ಥಾನ ವಶಪಡಿಸಿಕೊಳ್ಳಲು ಒಂದು ಹದ್ದಿನ ಕಣ್ಣಿಟ್ಟಿದ್ದ. ಕಪ್ಪ ಕಾಣಿಕೆ ಕೊಡುವ ವಿಚಾರದಲ್ಲಿ ಚೆನ್ನಮ್ಮ ಒಪ್ಪದಿದ್ದಾಗ, ಥ್ಯಾಕರೆ ಕಿತ್ತೂರಿನ ಮೇಲೆ ಯುದ್ಧ ಸಾರಿದ. ಅದು 1824 ಅಕ್ಟೋಬರ್‌ 23 ಕಿತ್ತೂರು ಸೈನ್ಯ ಹಾಗೂ ಬ್ರಿಟಿಷರ ನಡುವೆ ಮೊದಲ ಯುದ್ಧ ನಡೆದ ದಿನ. ಯುದ್ಧದ ತೀವ್ರಗೊಂಡ ಸಂದರ್ಭದಲ್ಲಿ ಥ್ಯಾಕರೆ, ಚೆನ್ನಮ್ಮಳನ್ನು ಕೊಲ್ಲಲು ಮುಂದಾದಾಗ, ಕೂಡಲೇ ಅಮಟೂರ ಬಾಳಪ್ಪ ಥ್ಯಾಕರೆ ಮೇಲೆ ಗುಂಡು ಹಾರಿಸಿ, ಯುದ್ಧದ ವಿಜಯ ಸಾರುತ್ತಾನೆ. ಬ್ರಿಟಿಷ್‌ ಸೈನ್ಯವೆಲ್ಲ ಥ್ಯಾಕರೆ ಸಾವಿನ ಸುದ್ದಿ ತಿಳಿದು ದಿಕ್ಕೆಟ್ಟು ಪಲಾಯನ ಮಾಡಿತು ಮತ್ತು ಸೈನಿಕರು ಬಂಧಿತರಾದರು.

ಇನ್ನೊಂದು ದೃಷ್ಟಿಕೋನ
ಇದೊಂದು ಕಥಾನಕವಾದರೆ, ಇನ್ನೊಂದು ಕಥೆಯ ಪ್ರಕಾರ, ಥ್ಯಾಕರೆ ಸ್ನೇಹಪೂರ್ವಕವಾಗಿ ನಿಮ್ಮ ಅರಮನೆಗೆ ಸೌಹಾರ್ದ ಭೇಟಿಗೆ ಬರುತ್ತೇನೆ. ನಾನು ಬರುವಾಗ ಅಲ್ಲಿ ಯಾವ ಸಶಸ್ತ್ರ ಯೋಧರು ಇರಬಾರದು ಎಂಬ ಕರಾರಿನ ಪತ್ರವೊಂದನ್ನು ಚೆನ್ನಮ್ಮಳಿಗೆ ಕಳಿಸಿದ್ದ. ಚೆನ್ನಮ್ಮ ಕೂಡ ಇದಕ್ಕೆ ಸಮ್ಮತಿಸಿದ್ದಳು. ಆದರೆ, ಇದರಲ್ಲೇನೋ ಸಂಚಿರಬಹುದೆಂದು ಅಮಟೂರ ಬಾಳಪ್ಪ ಹಾಗೂ ಸಂಗೊಳ್ಳಿ ರಾಯಣ್ಣನಿಗೆ ಅನಿಸಿತು. ಅದಕ್ಕಾಗಿ ಚೆನ್ನಮ್ಮಳಿಗೂ ತಿಳಿಸಿದೆ, ಜಂಗಮರ ವೇಷದಲ್ಲಿ ಲಿಂಗಪೂಜೆಗಾಗಿ ಅವರು ಅಲ್ಲಿರುತ್ತಾರೆ.

ಅರಮನೆಯಲ್ಲಿರುವಾಗ ಸಮಯ ನೋಡಿ ಚೆನ್ನಮ್ಮಳ ಹತ್ಯೆಗೈಯಬೇಕೆಂಬ ಸಂಚು ಅವನದ್ದಾಗಿತ್ತು. ಲಿಂಗ ಪೂಜೆ ನಡೆಯುವ ಸಮಯಕ್ಕೆ ಥ್ಯಾಕರೆ ಒಮ್ಮೆಲೇ ಚೆನ್ನಮ್ಮಳನ್ನು ಬಂಧಿಸಲು ಆಜ್ಞೆಯಿತ್ತ. ಕೂಡಲೇ ಮಾರುವೇಷದಲ್ಲಿದ್ದ ಅಮಟೂರ ಬಾಳಪ್ಪ ಕ್ಷಣ ಮಾತ್ರದಲ್ಲಿ ಥ್ಯಾಕರೆ ಮೇಲೆ ಗುಂಡು ಹಾರಿಸಿ ಹತ್ಯೆಗೈದ. ಏಷಿಯಾಟಿಕ್‌ ಜರ್ನಲ್‌ ಸಂಪುಟ 3, 1830 ದಾಖಲೆಯಲ್ಲಿ ಈ ಘಟನೆಯ ಉಲ್ಲೇಖ ಕಾಣಬಹುದು. ‘ಥ್ಯಾಕರೆಯನ್ನು ಕೊಂದ ಕಿತ್ತೂರಿನ ಯೋಧ ಅಮಟೂರ ಬಾಳಪ್ಪ’ ಎಂಬ ವರದಿ ಇಲ್ಲಿ ಲಭ್ಯವಿದೆ.

ಅಮಟೂರ ಬಾಳಪ್ಪನ ಕುರಿತಾಗಿ ಲಭ್ಯವಿರುವ ಅಧಿಕೃತ ದಾಖಲೆ ಇದೊಂದೆ. ಅಷ್ಟಕ್ಕೂ ಅವನ ಹಿನ್ನೆಲೆ, ಕುಟುಂಬ ಮತ್ತಿತರ ವಿವರ ಇನ್ನೂ ಅಸ್ಪಷ್ಟ. ಎರಡನೇ ಯುದ್ಧದ ಸಂದರ್ಭದಲ್ಲಿ ಆತ ಅಸುನೀಗಿದ ಎಂದು ಕೆಲ ಜನಪದರು ಹೇಳಿದರೆ, ಯುದ್ಧದ ಸೋಲು ಸಹಿಸಲಾಗದೇ ಉತ್ತರ ಭಾರತದತ್ತ ದೇಶಾಂತರ ಹೋದನೆಂದು ಕೆಲವು ಕಡೆ ಹೇಳಲಾಗಿದೆ. ಕಥನಗಳು ಏನೇ ಇರಲಿ ಈ ಎಲ್ಲ ಘಟನೆಗಳು ನಡೆದಿದ್ದು 1824ರಲ್ಲಿ. ಅಂದರೆ ಇಂದಿಗೆ ಬರೊಬ್ಬರಿ ಇನ್ನೂರು ವರ್ಷಗಳ ಹಿಂದೆ. ಥ್ಯಾಕರೆ ವಿರುದ್ಧ ಜಯ ಸಾಧಿಸಿದ್ದು, ಇಡೀ ಬ್ರಿಟಿಷರ ಜಂಗಾಬಲ ಅಡಗಿಸಿದ್ದಂತೂ ನಿಜ. ಈ ಕ್ಷಣಕ್ಕೆ ನಮ್ಮ ಕಣ್ಮುಂದೆ ಉಳಿಯುವುದು ರಾಣಿ ಚೆನ್ನಮ್ಮಳ ದಿಟ್ಟತನ, ಅಮಟೂರ ಬಾಳಪ್ಪನೆಂಬ ಯೋಧನ ಧೀರತನವಷ್ಟೇ… ಅದೆಂದಿಗೂ ಕನ್ನಡಿಗರ ಹೃದಯದಲ್ಲಿ ಶಾಶ್ವತ.
logoblog

Thanks for reading Kittur Rani Chennamma

Previous
« Prev Post

No comments:

Post a Comment

If You Have any Doubts, let me Comment Here