JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, January 31, 2024

Dattatreya Ramachandra Bendre

  Jnyanabhandar       Wednesday, January 31, 2024

💐💐💐💐💐💐💐💐
*ಇಂದು ನಾಡಕವಿ ದ ರಾ ಬೇಂದ್ರೆ ಯವರ ಹುಟ್ಟಿದ ದಿನ*

ಒಮ್ಮೆ ದ.ರಾ. ಬೇಂದ್ರೆ ಮತ್ತು ಸುರೇಶ ಕುಲಕರ್ಣಿಯವರು ಕುದುರೆಗಾಡಿ ಮಾಡಿಕೊಂಡು ದತ್ತಾತ್ರೇಯ ಗುಡಿಗೆ ಹೋದರು. ದೇವರಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಕುದುರೆಗಾಡಿ ಇರಲಿಲ್ಲ.
'ಮತ್ತೊಂದು ಗಾಡಿ ತೆಗೆದುಕೊಂಡು ಬರಲಾ' ಎಂದು ಕುಲಕರ್ಣಿಯವರು ಕೇಳಿದಾಗ,
'ಬೇಡ ನಡೆದೇ ಮುಂದೆ ಹೋಗೋಣ. ಅಲ್ಲಿಯೇ ಟಾಂಗಾ ಸಿಗುತ್ತದೆ' ಎಂದರು ಬೇಂದ್ರೆ. ಇಬ್ಬರೂ ನಡೆದು ಕೆ ಸಿ ಸಿ ಬ್ಯಾಂಕಿನ ಹತ್ತಿರ ಬಂದರು. ಅಲ್ಲೊಬ್ಬ ರಸ್ತೆಯ ಬದಿಯಲ್ಲಿ ಚಪ್ಪಲಿ ಹೊಲಿಯುತ್ತ ಕುಳಿತಿದ್ದ. ಇವರ ಚಪ್ಪಲಿಯ ಉಂಗುಷ್ಠ ಹರಿದದ್ದನ್ನು ನೋಡಿ,
'ಅಜ್ಜಾವ್ರ, ಉಂಗುಷ್ಠ ಹಚ್ಚಿಕೊಡತೇನಿ ಕೊಡ್ರಿ' ಎಂದ.
'ಆತು ಹಚ್ಚಿಕೊಡು' ಎಂದು ಅವನ ಕಡೆಗೆ ಹೋದರು.
ತಮ್ಮ ಚಪ್ಪಲಿ ತೆಗೆದುಕೊಡುವಾಗ ಆ ರಿಪೇರಿ ಮಾಡುವವ ಹೇಳಿದ, 'ಬಿಸಲಾಗ ಕಾಲು ಸುಡತಾವ, ಇದರ ಮೇಲೆ ಕಾಲು ಇಡ್ರಿ' ಎಂದು ಮತ್ತೊಂದು ಚಪ್ಪಲಿಯನ್ನು ಅವರ ಕಾಲಿನ ಹತ್ತಿರ ಇಟ್ಟ. ಅವನ ಪ್ರೀತಿ ಕಂಡು ಬೇಂದ್ರೆಯವರಿಗೆ ಅಂತಃಕರಣ ತುಂಬಿ ಬಂತು. 'ಅಲ್ಲೋ, ನನ್ನ ಕಾಲು ಸುಡೋದರ ಬಗ್ಗೆ ನಿನಗಾ ಕಾಳಜಿ ಅದ. ಆದರೆ ಸುಡೋ ಬಿಸಿಲೊಳಗ ನೀನು ಕೂತಿ. ನಿನ್ನ ಮೈ ಸುಡೋದರ ಬಗ್ಗೆ ಎಚ್ಚರ ಇಲ್ಲಾ' ಎಂದು ತಮ್ಮ ಕೊಡೆಯನ್ನು ಬಿಚ್ಚಿ ಅವನ ತಲೆಯ ಮೇಲೆ ಹಿಡಿದು ನಿಂತರು. ಆತ ಇವರ ಚಪ್ಪಲಿ ರಿಪೇರಿ ಮಾಡುತ್ತಿದ್ದ. ಅದು ಮುಗಿದ ಮೇಲೆ, 'ಪಾಲೀಶ್ ಮಾಡಲೇನ್ರಿ?' ಎಂದು ಕೇಳಿದ. ಇವರು 'ಹೂಂ' ಎಂದು ಮಾತಿಗಿಳಿದು ಅವನ ಮನೆತನದ ಇತಿಹಾಸವನ್ನೆಲ್ಲ ತಿಳಿದರು.

ಎಷ್ಟು ಮಕ್ಕಳು ನಿನಗ?

#ಎರಡು

ದಿನಕ್ಕ ಎಷ್ಟು ಹಣ ದುಡಿತೀ?

#ಹತ್ತು ರೂಪಾಯಿ, ಒಮ್ಮಮ್ಮೆ ಹೆಚ್ಚು ಕಡಿಮೆ ಆಗತೈತಿ .

ಶೆರೆ ಕುಡಿತೀ ಏನು?

#ಇಲ್ಲ, ಯಾವಾಗರೇ ಒಮ್ಮಮ್ಮೆ .

ಮನ್ಯಾಗ ಛತ್ರಿ ಅದ ಏನು?

#ಇದೇರಿ

ಇಷ್ಟು ಮಾತು ಆಗುವುದರೊಳಗೆ ಚಪ್ಪಲಿ ರಿಪೇರಿ ಕೆಲಸ ಮುಗಿದಿತ್ತು.

ಎಷ್ಟು ಆತು? ಬೇಂದ್ರೆ ಕೇಳಿದರು.

ಆತ ಕ್ಷಣ ವಿಚಾರ ಮಾಡಿ,

'ಒಂದೂವರೆ ರೂಪಾಯಿ ಆತ್ರಿ' ಎಂದ.

ಇವರು ಹತ್ತು ರೂಪಾಯಿ ತೆಗೆದು ಕೊಟ್ಟರು.

ಆತ 'ನನ್ನ ಕಡೆಗೆ ಚಿಲ್ರೆ ಇಲ್ಲರಿ' ಎಂದಾಗ ಬೇಂದ್ರೆ,

'ನೀನು ದಿನಕ್ಕೆ ಹತ್ತು ರೂಪಾಯಿ ದುಡೀತಿ.
ಇದು ಇವತ್ತಿನ ಗಳಿಕೆ.
ಮೊದಲು ಮನೆಗೆ ಹೋಗಿ ಕೊಡೆ ತೊಗೊಂಡು ಬಾ.
ನೆರಳು ಮಾಡಿಕೊಂಡು ದುಡಿ. ನಿನ್ನ ಹಿಂದ ಹೆಂಡತಿ ಮಕ್ಕಳು ಅವಲಂಬಿಸಿದ್ದಾರೆ ಎಂಬುದನ್ನು ಮರೀಬ್ಯಾಡ.
ಅವರಿಗೆ ಹಣ್ಣು ಹಂಪಲು ಒಯ್ಯಿ, ಕುಡೀಬ್ಯಾಡಾ' ಎಂದರು.

ಅವರ ಅಂತಃಕರಣದ ಮಾತಿಗೆ, ನೀಡಿದ ಹಣಕ್ಕೆ ಅವನ ಕಣ್ಣು ಒದ್ದೆಯಾದವು.

ಆತ ಕೇಳಿದ, 'ಅಜ್ಜಾವ್ರ, ನಿಮ್ಮ ಮನೆ ಎಲ್ಲಿ ಐತಿ?'.

'ಸಾಧನಕೇರಿಯೊಳಗ' ಎಂದರು ಬೇಂದ್ರೆ.

ಆತ 'ಬೇಂದ್ರೆಯವರ ಮನೀ ಹತ್ತಿರ ಏನ್ರಿ?' ಎಂದು ಕೇಳಿದ.

ಇವರು ಹೂಂ !! ಎನ್ನುತ್ತ ಟಾಂಗಾ ನಿಲ್ದಾಣದ ಕಡೆಗೆ ನಡೆದರು.

🌹“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. 'ರಸವೆ ಜನನ - ವಿರಸವೆ ಮರಣ, ಸಮರಸವೆ ಜೀವನ' ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.



🌹ಜೀವನ
ಬೇಂದ್ರೆ 1896 ನೆಯ ಇಸವಿ ಜನವರಿ 31 ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. 1913 ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ 1918 ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. 1935 ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು 1919 ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ” ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.
ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. 1981 ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ “ಧಾರವಾಡದ ಅಜ್ಜ” ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

🌹ಸಾಹಿತ್ಯ ಬೇಂದ್ರೆ ಸ್ಮಾರಕ. ಧಾರವಾಡ.
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. 1918 ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ "ನಾಕುತಂತಿ" ಕೃತಿಗೆ 1974 ನೆ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. 1921 ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
ಆಗಿನ್ನೂ ಸ್ವಾತಂತ್ರ್ಯ ಚಳವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954 ನೇ ಇಸವಿಯಲ್ಲಿ ತಯಾರಾದ 'ವಿಚಿತ್ರ ಪ್ರಪಂಚ' ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ. ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
ಗಣಿತದ ಲೆಕ್ಕಾಚಾರ ಮಾಡುತ್ತ 'ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ' ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು “ಕನ್ನಡದ ಠಾಗೋರ್” ಎಂದು ಕರೆಯಲಾಗುತ್ತದೆ.

🌹ಬೇಂದ್ರೆಯವರ ಸಾಹಿತ್ಯ,
ಕವನ ಸಂಕಲನಗಳು.
ಅಂಬಿಕಾತನಯದತ್ತರ ಸಮಗ್ರ ಕಾವ್ಯಗಳು..
ಕೃಷ್ಣಾಕುಮಾರಿ; ಗರಿ; ಮೂರ್ತಿ ಮತ್ತು ಕಾಮಕಸ್ತೂರಿ; ಸಖೀಗೀತ; ಉಯ್ಯಾಲೆ; ನಾದಲೀಲೆ; ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ) ಹಾಡುಪಾಡು; ಗಂಗಾವತರಣ; ಸೂರ್ಯಪಾನ; ಹೃದಯಸಮುದ್ರ; ಮುಕ್ತಕಂಠ; ಚೈತ್ಯಾಲಯ; ಜೀವಲಹರಿ; ಅರಳು ಮರಳು; ನಮನ; ಸಂಚಯ; ಉತ್ತರಾಯಣ; ಮುಗಿಲಮಲ್ಲಿಗೆ; ಯಕ್ಷ ಯಕ್ಷಿ; ನಾಕುತಂತಿ; ಮರ್ಯಾದೆ; ಶ್ರೀಮಾತಾ; ಇದು ನಭೋವಾಣಿ; ವಿನಯ; ಮತ್ತೆ ಶ್ರಾವಣಾ ಬಂತು; ಒಲವೇ ನಮ್ಮ ಬದುಕು; ಚತುರೋಕ್ತಿ ಮತ್ತು ಇತರ ಕವಿತೆಗಳನ್ನು ರಚಿಸಿದ್ದಾರೆ.

🌹ವಿಮರ್ಶೆ.
ಸಾಹಿತ್ಯ ಸಂಶೋಧನೆ; ವಿಚಾರ ಮಂಜರಿ; ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ; ಮಹಾರಾಷ್ಟ್ರ ಸಾಹಿತ್ಯ;
ಸಾಯೋ ಆಟ (ನಾಟಕ) ಕಾವ್ಯೋದ್ಯೋಗ; ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು; ಸಾಹಿತ್ಯದ ವಿರಾಟ್ ಸ್ವರೂಪ; ಕುಮಾರವ್ಯಾಸ ಪುಸ್ತಿಕೆಗಳನ್ನು ಬರೆದಿದ್ದಾರೆ.

🌹 ಪ್ರಶಸ್ತಿ, ಪುರಸ್ಕಾರ, ಬಿರುದು.
1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1958 ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1964 ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ, 1965 ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಲ್ಕರ್ ಬಹುಮಾನ 1968 ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು.
1973 ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ,
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್,
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
ಇಂತಹ ಮಹಾನ್ ಚೇತನದ ಹುಟ್ಟಿದ ದಿನದಂದು ಸಮಸ್ತ ಕರ್ನಾಟಕ ಶಿಕ್ಷಕರ ಬಳಗದ ಪರವಾಗಿ ಅಭಿನಂದಿಸುತ್ತಾ ಸ್ಮರಿಸೋಣ.

💐💐💐💐💐💐💐💐

logoblog

Thanks for reading Dattatreya Ramachandra Bendre

Previous
« Prev Post

No comments:

Post a Comment

If You Have any Doubts, let me Comment Here