JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, December 16, 2023

Vijaya Divas December 16

  Jnyanabhandar       Saturday, December 16, 2023
Vijaya Divas December 16

1971ರ ಡಿ. 3ರಂದು ಪಾಕ್ ವಾಯುಪಡೆ ಭಾರತದ ಎಂಟು ವಾಯುನೆಲೆಗಳ ಮೇಲೆ ದಾಳಿ ಮಾಡಿತು. ಅದೇ ದಿನ ಭಾರತದ ವಾಯುಸೇನೆಯು ಪಾಕ್ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿತು. ಅದನ್ನು ಎದುರಿಸಲಾಗದೆ ಡಿ. 16ರ ವೇಳೆಗೆ ಪಾಕ್ ಸೇನೆ ಮಂಡಿಯೂರಿತು. ಈ ಸಮರವು ಬಾಂಗ್ಲಾದೇಶದ ಉದಯವನ್ನು ಅಧಿಕೃತವಾಗಿ ಘೊಷಿಸಿತು.

ಭಾರತದ ಜಯವನ್ನು ನೆನೆಯುವ ಸಲುವಾಗಿ ಡಿ. 16ನ್ನು 'ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.ಈಡೇರದ ಬಯಕೆಗಳು ಮತ್ತು ಕನಸುಗಳನ್ನು ಹೊತ್ತರೆ ಅದರ ಫಲಶ್ರುತಿ ಅಷ್ಟಕ್ಕಷ್ಟೇ. ಸಾಹಸದ ಹೆಸರಿನಲ್ಲಿ ದುಸ್ಸಾಹಸಕ್ಕೆ ಕೈಹಾಕಿದರೆ ಲತ್ತೆ ಬೀಳುವುದು ಖಂಡಿತ. ಪಾಕಿಸ್ತಾನಕ್ಕೆ ಇದು ಎಷ್ಟೋ ಬಾರಿ ಅನುಭವಕ್ಕೆ ಬಂದಿದೆ. ಊಹ್ಞೂ! ಆ ದೇಶ ಅನುಭವದಿಂದ ಪಾಠವನ್ನೂ ಕಲಿಯುವುದಿಲ್ಲ, ಬುದ್ಧಿಯನ್ನೂ ಕಲಿಯುವುದಿಲ್ಲ. 1947ರಲ್ಲಿ ಸ್ವಾತಂತ್ರ್ಯ ಬಂದ ಕೆಲವೇ ದಿನಗಳಲ್ಲಿ ಪಾಕ್ ನಾಯಕರ ಕ್ಯಾತೆ ಶುರುವಾಗಿಹೋಯಿತು. ಕಾಶ್ಮೀರದ ಮೇಲೆ ಕಣ್ಣಿಟ್ಟು ಅವರ ಪ್ರಲಾಪ. ಆಗಿನ್ನೂ ಪಾಕ್ ಸೇನೆ ಬ್ರಿಟಿಷರ ಹಿಡಿತದಲ್ಲೇ ಇತ್ತು. ಹೀಗಾಗಿ ಸೇನೆಯನ್ನು ಕಳಿಸಿ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಯತ್ನಿಸುವುದು ದೂರದ ಮಾತಾಗಿತ್ತು. ಬ್ರಿಟಿಷ್ ಅಧಿಕಾರಿಗಳು ಇದಕ್ಕೆ ಒಪ್ಪುತ್ತಿರಲಿಲ್ಲ. ಹೀಗಾಗಿ ಬುಡಕಟ್ಟು ಜನರನ್ನು ದಾಳಿಗೆ ಕಳಿಸುವ ಹಂಚಿಕೆಯನ್ನು ಮಾಡಿದರು. ಅದರಂತೆ, ಪಷ್ಟುನ್ ಬುಡಕಟ್ಟು ದಂಗೆಕೋರರು 1947ರ ಅಕ್ಟೋಬರ್ 22ರಂದು ಕಾಶ್ಮೀರ ಗಡಿ ದಾಟಿ ಒಳಗೆ ಬಂದರು. ಆ ವೇಳೆಯಲ್ಲಿ ಕಾಶ್ಮೀರದಲ್ಲಿ ರಾಜ ಹರಿ ಸಿಂಗ್ ಆಡಳಿತ ನಡೆಸುತ್ತಿದ್ದ. ದೇಶ ವಿಭಜನೆ ಸಂದರ್ಭದಲ್ಲಿ, ಭಾರತದಲ್ಲಿ ಬೇಕಾದರೂ ಉಳಿಯಬಹುದು ಅಥವಾ ಪಾಕಿಸ್ತಾನವವನ್ನು ಬೇಕಾದರೂ ಸೇರಬಹುದು ಎಂಬ ಆಯ್ಕೆಯನ್ನು ದೇಶೀಯ ರಾಜರಿಗೆ ನೀಡಲಾಗಿತ್ತು. ರಾಜ ಹರಿ ಸಿಂಗ್ ಸ್ವತಂತ್ರವಾಗಿಯೇ ಉಳಿಯುವ ನಿರ್ಧಾರ ಕೈಗೊಂಡು ಯಾವ ದೇಶಕ್ಕೂ ಸೇರದೆ ಇರಲು ಬಯಸಿದ್ದ. ಆದರೆ ಅಷ್ಟರಲ್ಲಿ ಪಾಕ್ ಪ್ರೇರಿತ ಆಕ್ರಮಣಕಾರರು ರಾಜ್ಯದೊಳಗೆ ದಾಂಗುಡಿ ಇಟ್ಟಿದ್ದರು. ಆಗ ರಾಜನಿಗೆ ಆಶಾಕಿರಣವಾಗಿ ಕಂಡಿದ್ದು ಭಾರತ. ಅನ್ಯ ದಾರಿ ಇಲ್ಲದೇ ಆತ ಈ ಸನ್ನಿವೇಶ ಎದುರಿಸಲು ಭಾರತ ಸರ್ಕಾರದ ನೆರವನ್ನು ಯಾಚಿಸಿದ. ಕಬ್ಬಿಣ ಕಾದಾಗಲೇ ಬಡಿಯಬೇಕು ಎಂದು ಭಾವಿಸಿದ ನಾಯಕರು, ಭಾರತದಲ್ಲಿ ಕಾಶ್ಮೀರವನ್ನು ವಿಲೀನ ಮಾಡಿದರೆ ಮಾತ್ರ ಸೇನಾ ನೆರವು ನೀಡುವ ಭರವಸೆ ನೀಡಿದರು.

ರಾಜನಿಗೆ ಬೇರೆ ಆಯ್ಕೆ ಇರಲಿಲ್ಲ. ಈ ಷರತ್ತಿಗೆ ಒಪ್ಪದಿದ್ದರೆ ತನ್ನ ನೆಲ ಪಾಕ್ ಪಾಲಾಗುತ್ತದೆ. ಅದಕ್ಕಿಂತ ಭಾರತದ ಮಡಿಲು ಸೇರುವುದೇ ಉತ್ತಮ ಎಂದು ಭಾವಿಸಿದ ಆತ, ಕಾಶ್ಮೀರವನ್ನು ಭಾರತದ ಜತೆ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ (ಐಠಠ್ಟಿಠಛ್ಞಿಠಿ ಟ್ಛ ಅಚಠಠಜಿಟ್ಞ). ಈ ಒಪ್ಪಂದ ಏರ್ಪಡುವ ಮುನ್ನ ಜಮ್ಮು ಕಾಶ್ಮೀರ ರಾಜ್ಯ ಪಡೆಗಳು ಪಾಕ್ ಅತಿಕ್ರಮಣಕೋರರೊಂದಿಗೆ ಹೋರಾಟ ನಡೆಸುತ್ತಿದ್ದವು. ವಿಲೀನ ಪ್ರಕ್ರಿಯೆ ನಂತರ ಭಾರತದ ಸೇನೆ ರಂಗಪ್ರವೇಶ ಮಾಡಿತು.

ಕಾಶ್ಮೀರ ವಿಲೀನ ಒಪ್ಪಂದ ಕಾರಣಕ್ಕೆ ಪಾಕ್ ಸೈನಿಕರ ನೇರ ಪ್ರವೇಶಕ್ಕೆ ಬ್ರಿಟಿಷ್ ಅಧಿಕಾರಿಗಳು ಮೊದಲಿಗೆ ನಿರಾಕರಣೆ ಮಾಡಿದರೂ ಬಳಿಕ ಒತ್ತಡಕ್ಕೆ ಮಣಿದು ಹ್ಞೂ ಎಂದರು. ಭಾರತೀಯ ಸೇನೆಯು ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತ ಸಾಗಿತು. ಆ ಹಂತದಲ್ಲಿ ಆಗಿನ ಪ್ರಧಾನಿ ನೆಹರೂ ಅವರು ವಿಷಯವನ್ನು ವಿಶ್ವಸಂಸ್ಥೆ ಬಾಗಿಲಿಗೆ ಒಯ್ದರು. ಆ ಪ್ರಕಾರ ವಿಶ್ವಸಂಸ್ಥೆಯು ಕದನ ವಿರಾಮಕ್ಕೆ ಸೂಚನೆ ನೀಡಿತು. ಆ ಸಮಯದಲ್ಲಿ ಕಣಿವೆ ರಾಜ್ಯದ ಕೆಲ ಪ್ರದೇಶಗಳು ಪಾಕ್ ಹಿಡಿತದಲ್ಲಿ ಇದ್ದವು. ಕದನ ವಿರಾಮ ಒಪ್ಪಂದ ಪ್ರಕಾರ ಆಗ ಯಾವ ಪ್ರದೇಶಗಳು ಯಾರ ವಶದಲ್ಲಿ ಇದ್ದವೋ ಅವು ಆ ಕಡೆಗೆ ಸೇರಿದವು. ಅದೇ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ). ಆಗ ಅವಕಾಶ ಸಿಕ್ಕಿದ್ದರೆ ಭಾರತದ ಸೇನೆ ಎಲ್ಲ ಪ್ರದೇಶಗಳನ್ನು ವಶಪಡಿಸಿಕೊಂಡು ಕಾಶ್ಮೀರ ಮುಂದೆ ನಿರಂತರವಾಗಿ ಭಾರತಕ್ಕೆ ತಲೆನೋವಾಗುವ ಸಾಧ್ಯತೆ ಇರುತ್ತಿರಲಿಲ್ಲವೇನೋ.

ಇಲ್ಲಿ ಇನ್ನೂ ಕೆಲವು ಸಂಗತಿಗಳಿವೆ. ರಾಜ ಹರಿ ಸಿಂಗ್ ಭಾರತದ ಜತೆ ವಿಲೀನ ಪ್ರಕ್ರಿಯೆ ನೆರವೇರಿಸುವ ಸಂದರ್ಭದಲ್ಲಿ ಕೆಲ ಷರತ್ತುಗಳನ್ನು ಹಾಕಿದ್ದ. ವಿದೇಶಾಂಗ ವ್ಯವಹಾರ, ರಕ್ಷಣೆ ಮತ್ತು ಸಂವಹನ- ಈ ಮೂರು ವಿಭಾಗ ಹೊರತುಪಡಿಸಿ ಇತರ ಎಲ್ಲ ಅಧಿಕಾರ ತನ್ನ ಬಳಿಯೇ, ಅರ್ಥಾತ್ ರಾಜ್ಯದ ಬಳಿಯೇ ಇರಬೇಕು ಎಂಬುದು ಅವನ ಕಂಡೀಷನ್ ಆಗಿತ್ತು. ಹೀಗಾಗಿಯೇ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪ ಮುನ್ನೆಲೆಗೆ ಬಂತು ಮತ್ತು ಕಾರ್ಯಗತವಾಯಿತು.

ಒಂದು ದೇಶದಲ್ಲಿ ಎರಡು ಸಂವಿಧಾನ ಮತ್ತು ಎರಡು ರಾಷ್ಟ್ರಧ್ವಜ ಸಮಂಜಸವಲ್ಲ ಎಂಬ ಅನಿಸಿಕೆ 1950ರ ದಶಕದಲ್ಲಿಯೇ ಕೆಲ ವಲಯಗಳಲ್ಲಿ ಹರಳುಗಟ್ಟತೊಡಗಿತ್ತು. ಆಗಿನ ಜನಸಂಘ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಈ ಬಗ್ಗೆ ದೊಡ್ದ ದನಿಯೆತ್ತಿದರು. ಈ ವಿಷಯ ರಾಜಕೀಯವಾಗಿ, ಸಾಮಾಜಿಕವಾಗಿ ಚರ್ಚೆಯಾಯಿತು. ಕೋರ್ಟ್ ಮೆಟ್ಟಿಲೇರಿದ್ದೂ ಆಯಿತು. ಆದರೆ ವಿಶೇಷ ಸ್ಥಾನಮಾನ ಮುಂದುವರಿಯಿತು. ಮೊದಲು ಜನಸಂಘ ನಂತರ ಅದರ ರೂಪಾಂತರವಾದ ಭಾರತೀಯ ಜನತಾ ಪಕ್ಷ ಈ ಆಗ್ರಹವನ್ನು ಮುಂದುವರಿಸಿಕೊಂಡು ಬಂದು ಅದನ್ನು ತಮ್ಮ ಮುಖ್ಯ ಅಜೆಂಡಾಗಳಲ್ಲಿ ಒಂದಾಗಿಸಿದವು. ಮೋದಿ ಸರ್ಕಾರ 2019ರ ಆಗಸ್ಟ್ನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ದಿಟ್ಟ ನಿರ್ಧಾರ ಕೈಗೊಂಡಿತು. ಅದಕ್ಕೂ ವಾರ ಮುಂಚೆ ಜಮ್ಮು ಕಾಶ್ಮೀರಕ್ಕೆ ದೊಡ್ಡ ಸಂಖ್ಯೆಯಲ್ಲಿ ಸೈನಿಕರನ್ನು ಕಳಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಲು ನಿಗಾ ವಹಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಯತ್ನಗಳನ್ನು ನಡೆಸಿ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿತು. ಗೃಹ ಸಚಿವ ಅಮಿತ್ ಷಾ ಅವರು ಸಂಸತ್ ಕಲಾಪದಲ್ಲಿ ಈ ಬಗ್ಗೆ ಸಮರ್ಥವಾಗಿ ವಾದಮಂಡನೆ ಮಾಡಿ ಸರ್ಕಾರದ ನಿಲುವನ್ನು ದೇಶದ ಜನರ ಮುಂದಿರಿಸಿದರು. ಇದೀಗ ಸವೋಚ್ಚ ನ್ಯಾಯಾಲಯ ಸಹ ವಿಶೇಷ ಸ್ಥಾನಮಾನ ರದ್ದು ಮಾಡುವ ಕ್ರಮವನ್ನು ಎತ್ತಿಹಿಡಿಯುವ ಮೂಲಕ ಈ ವಿಷಯ ರ್ತಾಕ ಅಂತ್ಯ ಕಂಡಿದೆ. ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನವನ್ನು ಯಾವಾಗ ನೀಡಲಾಗುತ್ತದೆ ಮತ್ತು ಯಾವಾಗ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂಬುದು ಸದ್ಯದ ಕುತೂಹಲ.

ಹೇಳುತ್ತ ಹೋದರೆ ಪಾಕಿಸ್ತಾನದ ಕಿತಾಪತಿ ಒಂದೆರಡಲ್ಲ. ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ವಿಷಯದಲ್ಲಿ ಆಗಿದ್ದೂ ಇದೇ. ಹಾಗೆ ನೋಡಿದರೆ ಭಾಷಿಕವಾಗಿ, ಸಾಮಾಜಿಕವಾಗಿ ಉತ್ತರ ಭಾರತದ ಜತೆ ಸಮರಸ ಹೊಂದಿದ್ದ ಭಾಗ ಪಾಕ್ ವ್ಯಾಪ್ತಿಗೆ ಬಂದಿದ್ದು ಒಂದು ರೀತಿಯಲ್ಲಿ ಆಭಾಸವೇ. ಪಶ್ಚಿಮ ಪಾಕಿಸ್ತಾನದ ಆಡಳಿತಗಾರರು ಪೂರ್ವ ಪಾಕಿಸ್ತಾನದ ಜನರನ್ನು ಸಹವರ್ತಿಗಳು ಎಂದು ನೋಡದೆ ತಾರತಮ್ಯ ನೀತಿ ಅನುಸರಿಸತೊಡಗಿದರು. ಅದನ್ನು ತಮ್ಮ ವಸಾಹತು ಎಂಬ ರೀತಿಯಲ್ಲಿ ನೋಡತೊಡಗಿದರು. ಇದು ಮುಂದಿನ ಎಲ್ಲ ರಗಳೆಗಳಿಗೆ, ಸಮಸ್ಯೆಗಳಿಗೆ ಕಾರಣವಾಯಿತು. ಎಲ್ಲ ಬಗೆಯಲ್ಲಿ ದಮನ ಕಾರ್ಯ ನಡೆಯಿತು. ಇಲ್ಲಿನ ಸಂಪತ್ತೆಲ್ಲ ತಮ್ಮದೇ ಎಂಬಂತೆ ವರ್ತಿಸಿದ್ದು ಇಲ್ಲಿನ ಜನರಲ್ಲಿ ಅಸಮಾಧಾನ ಸೃಷ್ಟಿಸಿದ್ದು ಸಹಜವೇ ಆಗಿತ್ತು.

ಭಾಷಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹೀಗೆ ಎಲ್ಲ ರೀತಿಯಲ್ಲಿ ದಮನ ಕಾರ್ಯ ನಡೆಯಿತು. ಉದರದ ವೇದನೆಯನ್ನು ಎಷ್ಟು ದಿನ ಹಾಗೇ ಇಡಲು ಸಾಧ್ಯ? ಅದು ಒಂದಲ್ಲ ಒಂದು ರೀತಿಯಲ್ಲಿ ಸ್ಪೋಟಗೊಳ್ಳಲೇಬೇಕು. ಇಲ್ಲಿಯೂ ಅದೇ ಆಯಿತು. ಜನರು ಪ್ರತಿಭಟನೆ ನಡೆಸತೊಡಗಿದರು. ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ನಡುವೆ ಸುಮಾರು 1600 ಕಿಲೋಮೀಟರ್ ಅಂತರವಿದೆ. ಮಾನಸಿಕ ಅಂತರ ಇದಕ್ಕೂ ಜಾಸ್ತಿ. ಈ ಅಂತರ ಹಿಗ್ಗುತ್ತಲೇ ಹೋಗಿ ಬೆರೆಯಲಾಗದ ಸ್ಥಿತಿ ತಲುಪಿತು. ಪಾಕ್ ನಾಯಕರು ಸೇನೆಯನ್ನು ನಿಯೋಜಿಸುವ ಮೂಲಕ ಪೂರ್ವ ಪಾಕಿಸ್ತಾನದಲ್ಲಿ ದಬ್ಬಾಳಿಕೆಯನ್ನು ಮುಂದುವರಿಸಿದರು. 1970ರ ಚುನಾವಣೆಯಲ್ಲಿ ಶೇಖ್ ಮುಜಿಬುರ್ ರೆಹಮಾನ್ ಅವರ ಅವಾಮಿ ಲೀಗ್ ಬಹುಮತ ಪಡೆದರೂ ಪಶ್ಚಿಮ ಪಾಕಿಸ್ತಾನದ ನಾಯಕರು ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಒಪ್ಪಲಿಲ್ಲ. ಇದರಿಂದ ಕೆರಳಿದ ಅವಾಮಿ ಲೀಗ್ ನಾಯಕರು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದರು.

ಪಾಕ್ ನಾಯಕರು ಸುಮ್ಮನಿದ್ದ್ದಾರೆಯೇ? ಪ್ರತಿಭಟನೆಗಳನ್ನು ನಿರ್ದಯವಾಗಿ ಹತ್ತಿಕ್ಕತೊಡಗಿದರು. ಸೇನೆಯ ಮೂಲಕ ಜನರ ಮಾರಣಹೋಮ ನಡೆಸಿದರು. ಆ ಕ್ರೌರ್ಯದ ಪರಿಣಾಮವಾಗಿ ಎಷ್ಟು ಜನರು ಬಲಿಯಾದರು ಎಂಬ ಕುರಿತು ನಿಖರ ಮಾಹಿತಿ ಇಲ್ಲವಾದರೂ ಈ ಸಂಖ್ಯೆ ಮೂರು ಲಕ್ಷದಿಂದ 30 ಲಕ್ಷ ಎಂದು ವರದಿಗಳು ಹೇಳುತ್ತವೆ. ವಿವಿಧ ಬಗೆಯಲ್ಲಿ ಕಿರುಕುಳಕ್ಕೊಳಗಾದ ಅಲ್ಲಿನ ಜನರು ದೊಡ್ಡ ಸಂಖ್ಯೆಯಲ್ಲಿ ಭಾರತದತ್ತ ವಲಸೆ ಬರತೊಡಗಿದರು.

ಈ ವಲಸೆ ಮತ್ತು ಆ ಜನರ ದಾರುಣ ಸ್ಥಿತಿ ಕುರಿತು ಭಾರತ ಅಂತಾರಾಷ್ಟ್ರೀಯ ವಲಯದ ಗಮನ ಸೆಳೆಯಿತು. ಪ್ರಧಾನಿ ಇಂದಿರಾ ಗಾಂಧಿ ಅವರು ವಿವಿಧ ದೇಶಗಳ ನಾಯಕರನ್ನು ಸಂರ್ಪಸಿ ಭಾರತದ ನಿಲುವನ್ನು ವಿವರಿಸಿ ಬೆಂಬಲ ಪಡೆದುಕೊಂಡರು. ಪಾಕಿಸ್ತಾನದ ಅಂತರ್ಯುದ್ಧದಲ್ಲಿ ಭಾರತ ಏಕೆ ಪ್ರವೇಶಿಸಿತು ಎಂಬ ಪ್ರಶ್ನೆ ಸಹಜ. ಈಶಾನ್ಯ ಭಾರತದಲ್ಲಿ ಯಾವುದೇ ಪ್ರತಿಕೂಲ ಸನ್ನಿವೇಶ ನಿರ್ಮಾಣ ಆಗದಂತೆ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿತ್ತು. ಹಾಗೇನಾದ್ರೂ ಆದಲ್ಲಿ ಪಾಕ್ ಮಾತ್ರವಲ್ಲ ಚೀನಾ ಕೂಡ ಮೂಗು ತೂರಿಸುವ ಪ್ರಯತ್ನ ನಡೆಸುವುದು ಖಚಿತವಾಗಿತ್ತು. ಬಾಂಗ್ಲಾ ವಿಮೋಚನೆಯಾದಲ್ಲಿ ಈ ಅಪಾಯ ದೂರವಾಗಬಹುದಿತ್ತು.

ಈ ನಡುವೆ, ಬಾಂಗ್ಲಾ ವಿಮೋಚನಾ ಚಳವಳಿಯನ್ನೂ ಬೆಂಬಲಿಸಿದ ಭಾರತ ಅಲ್ಲಿನ ಹೋರಾಟಗಾರರಿಗೆ ತರಬೇತಿಯನ್ನು ಸಹ ನೀಡಿತು. ಇಷ್ಟೆಲ್ಲ ಆಗುವ ಹೊತ್ತಿಗೆ ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಮಾಡುವ ಸಾಹಸಕ್ಕೆ ತಯಾರಿ ನಡೆಸಿತ್ತು. 1971ರ ಡಿಸೆಂಬರ್ 3 ಸಂಜೆ 5.35ರ ವೇಳೆಗೆ ಪಾಕ್ ವಾಯುಪಡೆ ಭಾರತದ ಎಂಟು ವಾಯುನೆಲೆಗಳ ಮೇಲೆ ದಾಳಿಗೈದಿತು. ಅದು ಇದಕ್ಕೆ ಇಟ್ಟ ಹೆಸರು - ಆಪರೇಷನ್ ಚೆಂಗಿಸ್ ಖಾನ್. ಅಂದು ರಾತ್ರಿ ಆಕಾಶವಾಣಿ ಮೂಲಕ ದೇಶವನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಇಂದಿರಾ ಗಾಂಧಿ, ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಸಾರಿದೆ ಎಂದು ಘೊಷಿಸಿದರು. ಅದೇ ದಿನ ರಾತ್ರಿ ಭಾರತದ ವಾಯುಸೇನೆಯು ಪಾಕ್ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿತು. ಮುಂದೆ ಭಾರತದ ಸೇನೆಯು ಭೂ, ವಾಯು ಮತ್ತು ನೌಕಾ ದಾಳಿಗಳನ್ನು ಸಂಘಟಿಸಿತು. ಭಾರತದ ದಾಳಿಯನ್ನು ಎದುರಿಸಲಾಗದೆ ಡಿಸೆಂಬರ್ 16ರ ವೇಳೆಗೆ ಪಾಕ್ ಸೇನೆ ಮಂಡಿಯೂರಿತು. ಭಾರತದ ಲೆಫ್ಟಿನಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಸಮ್ಮುಖದಲ್ಲಿ ಪಾಕ್ ಲೆಫ್ಟಿನಂಟ್ ಜನರಲ್ ಎ. ಎ.ಕೆ. ನಿಯಾಜಿ ಅವರು ಶರಣಾಗತಿ ಒಪ್ಪಂದಕ್ಕೆ (ಶಿಮ್ಲಾ) ಸಹಿ ಹಾಕಿದರು. ಇದು ಸ್ವತಂತ್ರ ಭಾರತದ ಪ್ರಥಮ ನಿರ್ಣಾಯಕ ವಿಜಯವಾಗಿತ್ತು ಮತ್ತು ಶರಣಾಗತಿ ಪತ್ರ ಬರೆಸಿಕೊಂಡ ಮೊದಲ ಪ್ರಸಂಗವಾಗಿತ್ತು. 

ಭಾರತವು ಪಾಕ್ ಸೇನೆಯ ಸುಮಾರು 90,000 ಸೈನಿಕರನ್ನು ಯುದ್ಧ ಖೈದಿಗಳೆಂದು ವಶಕ್ಕೆ ಪಡೆದಿತ್ತು. ಎರಡನೇ ವಿಶ್ವಯುದ್ಧದ ನಂತರದಲ್ಲಿ ಇಷ್ಟು ಸಂಖ್ಯೆಯ ಸೈನಿಕರನ್ನು ವಶಕ್ಕೆ ಪಡೆದ ದಾಖಲೆ ಇದಾಗಿತ್ತು ಎಂಬುದು ಭಾರತದ ಸೇನೆಯ ಪರಾಕ್ರಮಕ್ಕೆ ಸಾಕ್ಷಿ. ಈ ವಿಜಯಕ್ಕಾಗಿ ನಮ್ಮ ಸುಮಾರು 4,000 ವೀರಯೋಧರ ಬಲಿದಾನ ಆಯಿತು. ಸುಮಾರು 12,000 ಸೈನಿಕರು ಗಾಯಗೊಂಡರು. ಪಾಕ್ ಕಡೆ 9,000 ಸೈನಿಕರು ಸಾವನ್ನಪ್ಪಿದರೆ 25,000 ಮಂದಿ ಗಾಯಗೊಂಡರು. ಈ ಸಮರವು ಬಾಂಗ್ಲಾದೇಶದ ಉದಯವನ್ನು ಅಧಿಕೃತವಾಗಿ ಘೊಷಿಸಿತು. ಭಾರತದ ಜಯವನ್ನು ನೆನೆಯುವ ಸಲುವಾಗಿ ಡಿ. 16ನ್ನು 'ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.

logoblog

Thanks for reading Vijaya Divas December 16

Previous
« Prev Post

No comments:

Post a Comment

If You Have any Doubts, let me Comment Here