JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, May 6, 2023

What is the authority of MLAs, how much grant is coming ? Full Details

  Jnyanabhandar       Saturday, May 6, 2023
Subject: What is the authority of MLAs, how much grant is coming; Here is the detailed answer to all the questions





ಶಾಸಕನೆಂದರೆ ಜನನಾಯಕ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಮತಗಳಿಂದ ಚುನಾಯಿತರಾಗುವ ಶಾಸಕರು ರಾಜ್ಯ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದೇಶದ ಪ್ರಜೆಯಾದವನಿಗೆ ಹೇಗೆ ಹಕ್ಕು ಮತ್ತು ಕರ್ತವ್ಯಗಳಿರುತ್ತದೆಯೋ, ಅದೇ ರೀತಿ ಶಾಸಕರಾಗಿ ಚುನಾಯಿತರಾಗುವ ವಿಧಾನಸಭಾ ಸದಸ್ಯರಿಗೂ ಕೆಲವೊಂದು ಅಧಿಕಾರಗಳಿರುತ್ತವೆ.


ಸದ್ಯ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಈ ವೇಳೆ ಶಾಸಕ ಸ್ಥಾನಕ್ಕೆ ಏರುವ ಇರಾದೆಯೊಂದಿಗೆ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಮತಯಾಚನೆ ಮಾಡುವುದು ಸಾರ್ವೇ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಒಬ್ಬ ಶಾಸಕನಾಗುವಾತ ಮಾಡಬೇಕಾದ ಕೆಲಸಗಳೇನು? ಅವರ ಕರ್ತವ್ಯ ಮತ್ತು ಜವಾಬ್ದಾರಿಗಳೇನು? ಅವರಿಗೆ ಅಧಿಕಾರ ಚಲಾಯಿಸುವ ಹಕ್ಕು ಇದೆಯಾ? ಪ್ರತಿಯೊಬ್ಬ ಶಾಸಕರಿಗೆ ಎಷ್ಟು ಅನುದಾನ ಸಿಗುತ್ತದೆ? ಅದನ್ನು ಹೇಗೆ ಮತ್ತು ಯಾವುದಕ್ಕೆ ಬಳಸಿಕೊಳ್ಳಬೇಕು... ಹೀಗೆ ಹಲವು ವಿಷಯಗಳ ಬಗ್ಗೆ ಮತದಾರರು ತಿಳಿದುಕೊಂಡಿರಬೇಕು. ಮತ ಕೇಳಲು ಬರುವವರು, ಈ ಹಿಂದೆ ಅವರು ಅಥವಾ ಅವರ ಪಕ್ಷದ ನಾಯಕರು ಹೇಗೆ ಅನುದಾನವನ್ನು ಬಳಸಿಕೊಂಡಿದ್ದಾರೆ ಎಂಬ ಬಗ್ಗೆಯೂ ಪ್ರಶ್ನೆಗಳನ್ನು ಕೇಳಬಹುದು. ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿ ಈ ಸುದ್ದಿಯಲಿದೆ.

ಭಾರತದ ಸಂವಿಧಾನವು ಚುನಾವಣೆಯಲ್ಲಿ ಗೆದ್ದು ಶಾಸಕನಾಗುವ ವಿಧಾನಸಭಾ ಸದಸ್ಯರಿಗೆ ಕೆಲವೊಂದು ಅಧಿಕಾರವನ್ನು ನೀಡಿದೆ. ಇದನ್ನು ಅವರು ಚಲಾಯಿಸುವ ಹಕ್ಕು ಪಡೆಯುತ್ತಾರೆ. ಆ ಬಗ್ಗೆ ಇಲ್ಲಿ ವಿವರವಿದೆ. ದೇಶದ ಸಂಸತ್ತು ಅಥವಾ ಸಂಸತ್ ಸದಸ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗದ ಪ್ರತಿಯೊಂದು ವಿಷಯಗಳ ಮೇಲೂ ಶಾಸಕರಾದವರು ಅಧಿಕಾರ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.


ಶಾಸಕಾಂಗ ಅಥವಾ ಕಾನೂನು ರೂಪಿಸುವ ಅಧಿಕಾರ (Legislative Powers)


ಭಾರತದ ಸಂವಿಧಾನದ ಪ್ರಕಾರ, ವಿಧಾನಸಭೆಯ ಸದಸ್ಯರು ರಾಜ್ಯ ಪಟ್ಟಿ(State List) ಮತ್ತು ಸಮಕಾಲೀನ ಪಟ್ಟಿ(ಪ್ರಸಕ್ತ ಆಗು ಹೋಗುಗಳು)ಯಲ್ಲಿರುವ ಎಲ್ಲಾ ಅಂಶಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಹೊಂದಿದ್ದಾರೆ. ಈ ಪಟ್ಟಿಗಳ ಅಡಿಯಲ್ಲಿ ಬರವ ಕೆಲವು ಅಂಶಗಳನ್ನು ನೋಡುವುದಾದರೆ, ಪೊಲೀಸ್, ಜೈಲು, ನೀರಾವರಿ, ಕೃಷಿ, ಸ್ಥಳೀಯ ಸರ್ಕಾರ, ಸಾರ್ವಜನಿಕ ಆರೋಗ್ಯ, ತೀರ್ಥಯಾತ್ರೆಗಳು ಸೇರಿದಂತೆ ಜನರ ನಿತ್ಯದ ಬದುಕಿನ ಭಾಗವಾಗುವ ಪ್ರಮುಖ ಅಂಶಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಶಾಸಕರಿಗಿದೆ. ಉಳಿದಂತೆ ಸಂಸದರು ಮತ್ತು ರಾಜ್ಯಸರ್ಕಾರದ ಭಾಗವಾದ ಶಾಸಕರು(ಉಭಯ ಸ್ತರದ ನಾಯಕರು) ಒಬ್ಬರೂ ಏಕರೂಪದ ಕಾನೂನುಗಳನ್ನು ರಚಿಸಬಹುದಾದ ಕೆಲವು ಅಂಶಗಳಿವೆ. ಅವುಗಳೆಂದರೆ ಶಿಕ್ಷಣ, ಮದುವೆ ಮತ್ತು ವಿಚ್ಛೇದನ, ಅರಣ್ಯಗಳು, ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ರಕ್ಷಣೆ ಕುರಿತಾಗಿಯೂ ಕಾನೂನು ರೂಪಿಸಬಹುದು.


ಕಾರ್ಯನಿರ್ವಾಹಕ ಅಧಿಕಾರ (Executive Powers)


ಸರ್ಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ಆಡಳಿತ ಪಕ್ಷ ಜವಾಬ್ದಾರನಾಗಿರುತ್ತದೆ. ಈ ಬಗೆಗಿನ ಯಾವುದೇ ಪ್ರಶ್ನೆಗಳಿಗೂ ವಿಧಾನಸಭೆಯಲ್ಲಿ ಶಾಸಕರು ಉತ್ತರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರದ ಚಟುವಟಿಕೆಗಳು ಮತ್ತು ತೆಗೆದುಕೊಳ್ಳುವ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಹಕ್ಕು ಶಾಸಕರಿಗಿದೆ.

ಪ್ರತಿ ರಾಜ್ಯದ ಶಾಸಕರು, ಆಯಾ ರಾಜ್ಯದ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದ ಚಟುವಟಿಕೆಗಳು ಮತ್ತು ಕ್ರಮಗಳನ್ನು ನಿಯಂತ್ರಿಸುವ ಅಧಿಕಾರ ಹೊಂದಿರುತ್ತಾರೆ. ಯಾವುದೇ ರಾಜ್ಯದಲ್ಲಿಯೂ ಶಾಸಕರು ಮಾತ್ರ ಅವಿಶ್ವಾಸ ನಿರ್ಣಯ(Vote of no-confidence)ವನ್ನು ಅಂಗೀಕರಿಸಬಹುದು.


ಚುನಾವಣಾ ಅಧಿಕಾರಗಳು (Electoral Powers)


ಶಾಸಕರು ಕೆಲವು ಚುನಾವಣಾ ಅಧಿಕಾರಗಳನ್ನು ಕೂಡಾ ಹೊಂದಿರುತ್ತಾರೆ. ಅಂದರೆ, ರಾಜ್ಯಸಭೆಯ ಸದಸ್ಯರನ್ನು ಶಾಸಕರು ಚುನಾಯಿಸುತ್ತಾರೆ. ಮುಖ್ಯವಾಗಿ ಭಾರತದ ರಾಷ್ಟ್ರಪತಿಯ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿಯೂ ಶಾಸಕರು ಮತದಾನ ಮಾಡುತ್ತಾರೆ. ಇದರ ಹೊರತಾಗಿ ಸ್ಪೀಕರ್ ಮತ್ತು ವಿಧಾನಸಭೆಯ ಉಪಸಭಾಪತಿಯನ್ನು ಆಯ್ಕೆ ಮಾಡುವ ಸಾಮೂಹಿಕ ಅಧಿಕಾರ ಶಾಸಕರಿಗಿದೆ.

ಇದರೊಂದಿಗೆ ವಿಧಾನ ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಕೂಡಾ ಶಾಸಕರಿಗಿದೆ. ಪ್ರಸ್ತುತ ಭಾರತದ ಆರು ರಾಜ್ಯಗಳು ಮಾತ್ರ ದ್ವಿಸದಸ್ಯ ಶಾಸಕಾಂಗ ವ್ಯವಸ್ಥೆಯನ್ನು ಹೊಂದಿದೆ. ಅಂದರೆ, ಮೇಲ್ಮನೆ ಎಂದು ಕರೆಯಲ್ಪಡುವ ವಿಧಾನ ಪರಿಷತ್‌ ಮತ್ತು ಕೆಳಮನೆ ಎಂದು ಕರೆಯಲ್ಪಡುವ ವಿಧಾನಸಭೆ ದೇಶದ ಆರು ರಾಜ್ಯಗಳಲ್ಲಿ ಮಾತ್ರ ಇದೆ. ಅವುಗಳೇ ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶ. ಇಂತಹ ರಾಜ್ಯಗಳಲ್ಲಿ ವಿಧಾನ ಪರಿಷತ್ತಿನ ಮೂರನೇ ಒಂದು ಭಾಗದಷ್ಟು ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಚುನಾಯಿಸುತ್ತಾರೆ.


ಶಾಸಕರ ಕೆಲಸ ಮತ್ತು ಜವಾಬ್ದಾರಿಗಳು


ಭಾರತದ ಸಂವಿಧಾನದ ಪ್ರಕಾರ, ಪ್ರತಿಯೊಬ್ಬ ಶಾಸಕರು ಈ ಕೆಳಗಿನ ಅಂಶಗಳ ಮೇಲೆ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿದ್ದಾರೆ.

ರಾಜ್ಯ ಪಟ್ಟಿ (State List) (ಪಟ್ಟಿ II)


ರಾಜ್ಯ ಪಟ್ಟಿಯು ಪ್ರತಿ ರಾಜ್ಯ ಶಾಸಕಾಂಗವು ನಿರ್ಧರಿಸಬಹುದಾದ 66 ಪ್ರಮುಖ ಅಂಶಗಳನ್ನು ಒಳಗೊಂಡಿವೆ. ಆದರೆ, ಇದರಲ್ಲಿರುವ ಕಾನೂನುಗಳು ಆಯಾ ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯಪಟ್ಟಿಯಲ್ಲಿರುವ ಮುಖ್ಯ ವಿಷಯಗಳೆಂದರೆ ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್, ಕಾರಾಗೃಹಗಳು, ಸ್ಥಳೀಯ ಸರ್ಕಾರ, ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ, ಆಸ್ಪತ್ರೆಗಳು ಮತ್ತು ಔಷಧಾಲಯಗಳು, ಭಾರತದೊಳಗೆ ತೀರ್ಥಯಾತ್ರೆ, ಗ್ರಂಥಾಲಯಗಳು, ಸಂವಹನ, ಕೃಷಿ, ಪಶುಸಂಗೋಪನೆ, ನೀರು ಸರಬರಾಜು, ನೀರಾವರಿ ಮತ್ತು ಕಾಲುವೆಗಳು, ಮೀನುಗಾರಿಕೆ, ರಸ್ತೆ ಪ್ರಯಾಣಿಕರ ತೆರಿಗೆ ಮತ್ತು ಸರಕು ತೆರಿಗೆ ಹಾಗೂ ಇತರ ಅಂಶಗಳು ಇದರಲ್ಲಿವೆ.

ಸಮಕಾಲೀನ ಪಟ್ಟಿ (Concurrent List) (ಪಟ್ಟಿ III)


ಈ ಪಟ್ಟಿಯು 47 ಅಂಶಗಳನ್ನು ಒಳಗೊಂಡಿದೆ. ಸಂಸತ್ತು ಮತ್ತು ವಿಧಾನಸಭೆಯು ಜಂಟಿಯಾಗಿ ಪಟ್ಟಿ IIIರಲ್ಲಿ ಪಟ್ಟಿ ಮಾಡಲಾದ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರವನ್ನು ಹೊಂದಿದೆ. ಅಂದರೆ ಇದು ಶಾಸಕರು ಮತ್ತು ಸಂಸದರು ಇಬ್ಬರಿಗೂ ಸಂಬಂಧಿಸಿದೆ. ಈ ಪಟ್ಟಿಯಲ್ಲಿ ಪಟ್ಟಿ ಮಾಡಲಾದ ಪ್ರಮುಖ ಅಂಶಗಳೆಂದರೆ ಕ್ರಿಮಿನಲ್ ಕಾನೂನು, ಕ್ರಿಮಿನಲ್ ಕಾರ್ಯವಿಧಾನ, ಮದುವೆ ಮತ್ತು ವಿಚ್ಛೇದನ, ಕೃಷಿ ಭೂಮಿ ಹೊರತುಪಡಿಸಿ ಆಸ್ತಿ ವರ್ಗಾವಣೆ, ಒಪ್ಪಂದ, ಟ್ರಸ್ಟ್ ಮತ್ತು ಟ್ರಸ್ಟಿಗಳು, ನಾಗರಿಕ ಕಾರ್ಯವಿಧಾನ, ನ್ಯಾಯಾಂಗ ನಿಂದನೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ, ಅರಣ್ಯ, ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ರಕ್ಷಣೆ, ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಯೋಜನೆ, ಕಾರ್ಮಿಕ ಸಂಘಟನೆಗಳು, ಶಿಕ್ಷಣ, ಕಾರ್ಮಿಕರ ಕಲ್ಯಾಣ, ಒಳನಾಡು ಹಡಗು ಸಂಚಾರ, ಬೆಲೆ ನಿಯಂತ್ರಣ ಸೇರಿದಂತೆ ಇತರ ಕೆಲವು ಅಂಶಗಳು ಈ ಪಟ್ಟಿಯಲ್ಲಿ ಬರುತ್ತದೆ.

ಶಾಸಕರಿಗೆ ಎಷ್ಟು ಅನುದಾನ ಬರುತ್ತದೆ?


ವಿಧಾನಮಂಡಲದ ಉಭಯ ಸದನಗಳ ಸದಸ್ಯರಿಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ನೀಡಲಾಗುತ್ತದೆ. ಪ್ರತಿಯೊಬ್ಬ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಪ್ರತಿ ವರ್ಷ(ಹಣಕಾಸು ವರ್ಷ)ವೂ ಬರೋಬ್ಬರಿ 2 ಕೋಟಿ ರೂಪಾಯಿ ಮೊತ್ತವನ್ನು ಶಾಸಕರ ನಿಧಿಯ ರೂಪದಲ್ಲಿ ನೀಡಲಾಗುತ್ತದೆ.


ರಾಜ್ಯ ವಿಧಾನಸಭೆಯ ಸಂಖ್ಯಾಬಲ 224. ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಬಲ 75. ಹೀಗಾಗಿ ಉಭಯ ಸದನಗಳ ಸದಸ್ಯರ ಸಂಖ್ಯೆ 299 ಆಗಲಿದೆ. ವಿಧಾನಸಭೆಯಲ್ಲಿ ಒಬ್ಬ ಆಂಗ್ಲೋ ಇಂಡಿಯನ್ ಸದಸ್ಯರ ನಾಮನಿರ್ದೇಶನ ಸೇರಿದರೆ, ಈ ಸಂಖ್ಯಾಬಲ 300 ಆಗುತ್ತದೆ. ಉಭಯ ಸದನಗಳ ಒಟ್ಟು 300 ಸದಸ್ಯರಿಗೆ ವರ್ಷಕ್ಕೆ 600 ಕೋಟಿ ರೂಪಾಯಿ ಹಣವನ್ನು ಆಯಾ ಶಾಸಕರ ನಿಧಿಗೆ ಕೊಡಲಾಗುತ್ತದೆ. ಹಾಗಂತಾ, ಈ ಎರಡು ಕೋಟಿ ರೂಪಾಯಿ ಮೊತ್ತವನ್ನು ನೇರವಾಗಿ ಶಾಸಕರ ಖಾತೆಗಳಿಗೆ ಹಾಕಲಾಗುವುದಿಲ್ಲ. ಹಣಕಾಸು ಇಲಾಖೆಯು ಈ ಮೊತ್ತವನ್ನು ಆಯಾ ಶಾಸಕರ ಕ್ಷೇತ್ರ ವ್ಯಾಪ್ತಿಯ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ನಾಲ್ಕು ಕಂತುಗಳಲ್ಲಿ ಜಮಾ ಮಾಡುತ್ತದೆ. ಶಾಸಕರು ಅವರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಹಣ ಬಿಡುಗಡೆಯಾಗುತ್ತದೆ.


ಶಾಸಕರು ಯಾವ ಯೋಜನೆಗೆ ಈ ಅನುದಾನ ಬಳಸಬಹುದು?


ಜನಸಾಮಾನ್ಯರ ಮತ ಪಡೆದು ಆಯ್ಕೆಯಾಗುವ ಶಾಸಕರು, ಈ ಮೊತ್ತವನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನೋಪಯೋಗಿ ಕೆಲಸಗಳಿಗೆ ಬಳಸಬಹುದು. ಶಾಸಕರ ನಿಧಿ ಎಂದು ಕರೆಯ್ಪಡುವ ಮೊತ್ತವನ್ನು ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಸಮುದಾಯ ಭವನ, ಗ್ರಂಥಾಲಯ, ಆಸ್ಪತ್ರೆ ಕಟ್ಟಡ, ಗ್ರಾಮೀಣ ರಸ್ತೆ, ಚರಂಡಿ, ಬೀದಿ ದೀಪ, ಬಸ್ ತಂಗುದಾಣ, ತುರ್ತು ಕುಡಿಯುವ ನೀರು ಸೇರಿದಂತೆ ವಿವಿಧ ಜನಪರ ಕೆಲಸಗಳಿಗೆ ಬಳಸಬಹುದಾಗಿದೆ.


ಶಾಸಕರ ನಿಧಿಗೆ ಬಿಡುಗಡೆಯಾಗುವ ಈ ಎಲ್ಲಾ ಮೊತ್ತವನ್ನು ಶಾಸಕರು ಸದ್ಬಳಕೆ ಮಾಡಿಕೊಂಡಿರುವ ನಿದರ್ಶನ ತುಂಬಾ ಕಡಿಮೆ. ಜಿಲ್ಲಾಧಿಕಾರಿಗಳವರೆಗೆ ಬರುವ ಮೊತ್ತವು, ಅಲ್ಲಿಂದ ಶಾಸಕರ ಕಾಳಜಿಯ ಮೇಲೆಗೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಿರುವುದು ಕೂಡಾ ಕಡಿಮೆ. ತಮ್ಮ ತಮ್ಮ ಕ್ಷೇತ್ರಾಭಿವೃದ್ಧಿಗೆ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ, ಶಾಸಕರು ಈ ಅನುದಾನವನ್ನು ಬಳಸಲು ನಿರಾಸಕ್ತಿ ತೋರಿರುವ ಉದಾಹರಣೆ ಸಾಕಷ್ಟಿದೆ.

ಮಾಹಿತಿ ಸಂಗ್ರಹ: Hindusthan Times Kannada via Daily Hunt

logoblog

Thanks for reading What is the authority of MLAs, how much grant is coming ? Full Details

Previous
« Prev Post

No comments:

Post a Comment

If You Have any Doubts, let me Comment Here