JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, March 22, 2023

Ugadi Information in Kannada 2023

  Jnyanabhandar       Wednesday, March 22, 2023
Ugadi 2023 Full Details in Kannada

ಯುಗಾದಿ ಹಬ್ಬದ ಮಹತ್ವ, ವಿಶೇಷತೆ ಮತ್ತು ಇತಿಹಾಸ

The Hindu festival Ugadi will be celebrated on March 22, 2023. Ugadi, also known as Yugadi is a Hindu festival that marks the New Year's Day for the States of Andhra Pradesh, Telangana and Karnataka in India.
ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬವನ್ನು ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಏಕೆಂದರೆ ಈ ಹಬ್ಬದ ಸಮಯದಲ್ಲಿ ವಸಂತ ಋತುವು ಆರಂಭವಾಗುತ್ತದೆ. ಈ ಕಾರಣದಿಂದಾಗಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ, ಇದರೊಂದಿಗೆ, ಈ ಸಮಯದಲ್ಲಿ ಹೊಸ ಬೆಳೆಯ ಬಗ್ಗೆ ಜನರು ಮನಸ್ಸಿನಲ್ಲಿ ಸಂತೋಷವನ್ನು ಹೊಂದಿರುತ್ತಾರೆ.

ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ *ಯುಗಾದಿ*. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಯೋಜನೆಯನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ಯುಗಾದಿ’ ಎಂಬ ಪದ ವ್ಯುತ್ಪತ್ತಿಯಾಗಿದೆ. ಈ ಯುಗಾದಿ ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ. ಜೊತೆಗೆ ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ. ಋತುಗಳು, ಗ್ರಹಗಳು, ನಕ್ಷತ್ರಗಳು ಈ ದಿನ ಸೃಷ್ಟಿ ಆಯಿತು ಎನ್ನುವ ನಂಬಿಕೆಯೂ ಇದೆ.

ಯುಗಾದಿ ಹಬ್ಬವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಆಚರಿಸುತ್ತಾರೆ. ಹುಣ್ಣಿಮೆ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಆ ಮಾಸ ಆರಂಭವಾಗುತ್ತದೆ.

*ಚಾಂದ್ರಮಾನ ಯುಗಾದಿ:*
ಚಿತ್ತ ನಕ್ಷತ್ರ ಇದ್ದರೆ ಚೈತ್ರ ಮಾಸ, ವಿಶಾಖ ನಕ್ಷತ್ರ ಇದ್ದರೆ ವೈಶಾಖ ಮಾಸ, ಜೇಷ್ಠ ನಕ್ಷತ್ರ-ಜೇಷ್ಠ ಮಾಸ, ಉತ್ತರಾಷಡ ನಕ್ಷತ್ರ-ಆಷಾಢ ಮಾಸ, ಶ್ರವಣ ನಕ್ಷತ್ರ- ಶ್ರಾವಣ ಮಾಸ, ಪೂರ್ವಭದ್ರ ನಕ್ಷತ್ರ-ಭಾದಪ್ರದ ಮಾಸ, ಅಶ್ವಿನಿ ನಕ್ಷತ್ರ-ಅಶ್ವಯುಜ ಮಾಸ, ಕೃತಿಕಾ ಮಾಸ-ಕಾರ್ತಿಕ ಮಾಸ, ಮೃಗಶಿರಾ ನಕ್ಷತ್ರ-ಮಾರ್ಗಶಿರ ಮಾಸ, ಪುಷ್ಯ ನಕ್ಷತ್ರ-ಪುಷ್ಯ ಮಾಸ, ಮಖಾ ನಕ್ಷತ್ರ-ಮಾಘ ಮಾಸ ಮತ್ತು ಉತ್ತರ ನಕ್ಷತ್ರ-ಪಾಲ್ಗುಣ ಮಾಸ ಹೀಗೆ 12 ಮಾಸಗಳು ಆಯಾ ನಕ್ಷತ್ರಗಳ ಹೆಸರಿನಿಂದ ಕರೆಯುತ್ತಾರೆ. ಈ ರೀತಿ ಚಂದ್ರನಿಂದಲೇ ಎಲ್ಲಾ ಲೆಕ್ಕಚಾರ ಮಾಡುವುದರಿಂದ ಈ ವರ್ಷದ ಮೊದಲ ದಿನವನ್ನು *ಚಂದ್ರಮಾನ ಯುಗಾದಿ* ಎಂದು ಕರೆಯಲಾಗುತ್ತದೆ. ಚಾಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

*ಸೌರಮಾನ ಯುಗಾದಿ*:
ರವಿ ಗ್ರಹವು ಒಂದು ಕ್ರಾಂತಿಯಿಂದ ಮತ್ತೊಂದು ರಾಶಿಯ ಕ್ರಾಂತಿವರೆಗೆ ಭ್ರಮಣ ಮಾಡಲು ಸುತ್ತುವ ಕಾಲಕ್ಕೆ ಮಾಸ ಎಂದು ಹೇಳಲಾಗುತ್ತದೆ. ಅಂದರೆ ರವಿಯು ಅಮಾವಾಸ್ಯೆ ದಿವಸ ಮೇಷ ರಾಶಿಯಲ್ಲಿದ್ದರೆ ಆ ಮಾಸವನ್ನು ಚೈತ್ರ ಮಾಸ ಎನ್ನುವರು. ವೃಷಭ ರಾಶಿಗೆ ರವಿ ಬಂದರೆ ಅದನ್ನು ವೈಶಾಖ ಮಾಸ ಎಂದು ಕರೆಯಲಾಗುತ್ತದೆ. ಮಿಥುನ-ಜೇಷ್ಠ ಮಾಸ, ಕಟಕಕ್ಕೆ-ಆಷಾಢ ಮಾಸ, ಸಿಂಹ-ಶ್ರಾವಣ ಮಾಸ, ಕನ್ಯಾ-ಭಾದ್ರಪದ, ತುಲಾ-ಅಶ್ವಿಜ ಮಾಸ, ವೃಶ್ಚಿಕ-ಕಾರ್ತಿಕ ಮಾಸ, ಧನಸ್ಸು-ಮಾರ್ಗಶಿರಾ, ಮಕರ-ಪುಷ್ಯ ಮಾಸ, ಕುಂಭ-ಮಾಘ ಮಾಸ ಮತ್ತು ಮೀನ-ಪಾಲ್ಗುಣ ಮಾಸ ಎಂದು ಕರೆಯಲಾಗುತ್ತದೆ. ಈ ರೀತಿ ರವಿ ಗ್ರಹದಿಂದ ಎಲ್ಲ ಲೆಕ್ಕಾಚಾರ ಮಾಡುವುದರಿಂದ ಈ ವರ್ಷದ ಮೊದಲ ದಿನವನ್ನು *ಸೌರಮಾನ ಯುಗಾದಿ* ಎಂದು ಕರೆಯಲಾಗುತ್ತದೆ.

ಇವರೆಡು 15 ದಿನಗಳ ಅಂತರದಲ್ಲಿ ಬರುತ್ತವೆ. ಈ ಸೌರಮಾನ ಯುಗಾದಿಯನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಚರಿಸುತ್ತಾರೆ. ವೇದ ಕಾಲದಲ್ಲಿ ಸೌರಮಾನ ಅನುಸಾರವಾಗಿ ಮಾಸಗಳು ಪ್ರಚಾರದಲ್ಲಿದ್ದವು.

*ಇತಿಹಾಸ:*
ಯುಗಾದಿಯ ಚಂದ್ರಮಾನ ಪದ್ಧತಿಯ ಹೊಸ ವರ್ಷದ ಪ್ರಾರಂಭದ ದಿನ. ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ *‘ಉಂಡಿದ್ದೆ ಉಗಾದಿ ಮಿಂದಿದ್ದೆ ದೀಪಾವಳಿ’.*

ಈ ಹಬ್ಬದ ಹಿರಿಮೆ-ಗರಿಮೆ ಮಹಿಮೆಗಳನ್ನು ಅಥರ್ವ ವೇದ, ಶತಪಥ ಬ್ರಾಹಣ, ಧರ್ಮಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.

ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಆರಂಭಿಸಿದ. ಅಯೋಧ್ಯೆಯ ಪ್ರಜೆಗಳು ಸಂತೋಷದಿಂದ ಮನೆಯ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು. ಇಂದಿಗೂ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ಧತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ (ಗುಡಿ=ಬಾವುಟ) ಎನ್ನುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಯುಗಾದಿಯನ್ನು *ಗುಡಿಪಾಡ್ಯ* ಹೆಸರಿನಲ್ಲಿ ಆಚರಿಸಲಾಗುತ್ತದೆ

ರೋಮನ್ನರಿಗೆ ಜನವರಿಯ ಮೊದಲ ದಿನವಿದ್ದಂತೆ, ಹಿಂದೂಗಳಿಗೆ *‘ಯುಗಾದಿ’* ಆದಿಯ ದಿನವಾಗಿದೆ. ಯುಗಾದಿಯ ಶಕ್ತಿ ಉಪವಾಸನೆಯ ಆರಂಭದ ದಿನವಾಗಿದ್ದು, ಈ ದಿನದಿಂದ ವಸಂತ ನವರಾತ್ರಿ ಆರಂಭವಾಗುತ್ತದೆ. ವರ್ಷಾಧಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭ ಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ ಇದೆ. ಅಂದರೆ ಯುಗಾದಿಯ ದಿನ ಬೆಳಗ್ಗೆ ಎದ್ದು ಶ್ರೀರಾಮನನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು-ಬೆಲ್ಲ ತಿನ್ನಲಾಗುತ್ತದೆ.

*ಯುಗಾದಿಯ ವಿಶೇಷತೆ:*
ಈ ಹಬ್ಬದಂದು ಬೆಲ್ಲ ಮತ್ತು ಕಹಿಯಾದ ಬೇವು ಮಿಶ್ರಣವನ್ನು ಸೇವಿಸುವ ಆಚರಣೆ ಹಲವು ಕಡೆಗಳಲ್ಲಿ ಇದೆ. ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ. ಸಂಪೂರ್ಣ ಸುಖ ಮತ್ತು ದು:ಖದ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳಿಂದಲೂ ಬದುಕು ಕೂಡಿದೆ. ಇವುಗಳ ಸಂಕೇತವೇ ಬೇವು ಬೆಲ್ಲ.

*ಖಣಿ ಇಡುವುದು* : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲ್ಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ
ಅಂದಿನ ವಿಶೇಷ.

*ವಿಶೇಷ ಆಹಾರ*
ಒಬ್ಬಟ್ಟು ಅಥವಾ ಹೋಳಿಗೆ ಅಂದಿನ ವಿಶೇಷ ತಿನಿಸು.. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. *ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನ ಕಾಯಿಯಿಂದ ಉಪ್ಪಿನ ಕಾಯಿಯನ್ನು ಮಾಡುವರು

*ಬೇವು-ಬೆಲ್ಲದ* ವಿಶೇಷತೆ ಏನು?
* ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ.
* ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ.
* ಮಾನವ ವಜ್ರದ್ರೇಹಿಯಾಗುತ್ತಾನೆ.
* ಸಂಪತ್ತು ಉಂಟಾಗುತ್ತದೆ.
* ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

*ಪಂಚಾಂಗ ಶ್ರವಣ:*
ಸಾಯಾಂಕಾಲ ಪಂಚಾಂಗ ಶ್ರವಣ ಮಾಡುವುದು ಈ ಹಬ್ಬದ ಮತ್ತೊಂದು ವಿಶೇಷ ಆಚರಣೆಯಾಗಿದೆ. ಪಂಚಾಂಗದ ಪ್ರಕಾರ ಫಲಾಫಲಗಳನ್ನು, ಉಪಯುಕ್ತ ದಿನಗಳನ್ನೂ ತಿಳಿದುಕೊಂಡು ವ್ಯಾಪಾರ, ವಹಿವಾಟು, ವ್ಯವಸಾಯ ನಿಯೋಜಿಸಿ ಕೊಳ್ಳ ಬಹುದು. ಯುಗಾದಿಯಂದು ಪಾಡ್ಯ ಬರುವಾಗ ಹೊಸ ಸಂವತ್ಸರದ ತಿಥಿ, ವಾರ, ನಕ್ಷತ್ರಾದಿಗಳು ಉದಯಿಸುತ್ತವೆ. ಆದ್ದರಿಂದ ಪಾಡ್ಯಮಿಯಂದು
ಹಬ್ಬದ ಆಚರಣೆ ಮಾಡುತ್ತಾರೆ.

*ಯುಗಾದಿ ಕವಿತೆ*
ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಈ ಕವಿತೆ ಸುಪ್ರಸಿದ್ಧವಾದುದು.

"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ|
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ|
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ|
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ|
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ|
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"||ಯುಗ ಯುಗಾದಿ ಕಳೆದರು|

(ಮಾಹಿತಿ: ಪಬ್ಲಿಕ್ ಟಿವಿ ಹಾಗೂ ಅಂತರ್ಜಾಲದಿಂದ ಸಂಗ್ರಹ)

ಸರ್ವರಿಗೂ *ಚಂದ್ರಮಾನ ಯುಗಾದಿಯ* ಹಾರ್ದಿಕ ಶುಭಾಶಯಗಳು. *ಹಳತನ್ನು ಮರೆತು ಹೊಸತನ್ನು ಸ್ವಾಗತಿಸೋಣ.*
logoblog

Thanks for reading Ugadi Information in Kannada 2023

Previous
« Prev Post

No comments:

Post a Comment

If You Have any Doubts, let me Comment Here